



ಡೈಲಿವಾರ್ತೆ: 17/ಮೇ/2026

ಕೊಲ್ಲೂರು ಬಳಿ ಭೀಕರ ರಸ್ತೆ ಅಪಘಾತ: ಕೇರಳ ಮೂಲದ ಇಬ್ಬರು ಪ್ರವಾಸಿಗರು ಸಾವು, ಎಂಟು ಮಂದಿ ಸ್ಥಿತಿ ಗಂಭೀರ

ಕೊಲ್ಲೂರು: ಕೊಡಚಾದ್ರಿ ಪ್ರವಾಸ ಮುಗಿಸಿ ಮರಳುತ್ತಿದ್ದ ಕೇರಳ ಮೂಲದ ಪ್ರವಾಸಿಗರ ಜೀಪ್ ಹಾಗೂ ಟೆಂಪೋ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿರುವ ಧೃತಿಗೆಡಿಸುವ ಘಟನೆ ಭಾನುವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ದಳಿ ಎಂಬಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಕೇರಳ ಮೂಲದ ನಿವಾಸಿಗಳಾದ ಜ್ಯೋತಿ (34) ಮತ್ತು ಆರ್ಯ ಅನೂಪ್ (26) ಎಂಬುವರು ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ವಿವರ:
ಕೊಡಚಾದ್ರಿ ಬೆಟ್ಟ ಸಾಲುಗಳ ಪ್ರವಾಸ ಮುಗಿಸಿಕೊಂಡು ಪ್ರವಾಸಿಗರನ್ನು ಹೊತ್ತು ಕೊಲ್ಲೂರಿನತ್ತ ಬರುತ್ತಿದ್ದ ಜೀಪ್ ಹಾಗೂ ಕೊಲ್ಲೂರು ಕಡೆಯಿಂದ ನಾಗೋಡಿ ಕಡೆಯತ್ತ ಸಾಗುತ್ತಿದ್ದ ಟೆಂಪೋ ನಡುವೆ ದಳಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಜೀಪ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳದಲ್ಲಿ ಕರುಣಾಜನಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಾಯಾಳುಗಳು ಹಾಗೂ ಮೃತರು ಕೇರಳ ಮೂಲದ ಒಂದೇ ಕುಟುಂಬಕ್ಕೆ ಸೇರಿದವರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದುರಂತದಲ್ಲಿ ಜೀಪ್‌ನಲ್ಲಿದ್ದ ಪ್ರಯಾಣಿಕರಾದ ಆಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಬೆ (37), ಅನೂಪ್ (37), ಜ್ಯೋತಿ (43) ಹಾಗೂ ಜೀಪ್ ಚಾಲಕ ದೇವರಾಜ್ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರಿಗೂ ತುರ್ತು ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿಷಯ ತಿಳಿಯುತ್ತಿದ್ದಂತೆ ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕರುಗಳಾದ (PSI) ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಭೀಮಾಶಂಕರ್ ಅವರು ಸಿಬ್ಬಂದಿಯೊಂದಿಗೆ ತಕ್ಷಣವೇ ಘಟನಾ ಸ್ಥಳಕ್ಕೆ ಮತ್ತು ಗಾಯಾಳುಗಳನ್ನು ದಾಖಲಿಸಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.