



ಡೈಲಿವಾರ್ತೆ: 18/ಮೇ/2026

ಗುಡುಗು ಸಿಡಿಲಿನ ಆರ್ಭಟಕ್ಕೆ ಶಿಕ್ಷಕ ಹೃದಯಾಘಾತದಿಂದ ಸಾವು

ದಾವಣಗೆರೆ: ಏಕಾಏಕಿ ಆರಂಭಗೊಂಡ ಗುಡುಗು-ಸಿಡಿಲಿನ ಭಾರೀ ಆರ್ಭಟದಿಂದ ಬೆಚ್ಚಿಬಿದ್ದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಾಗರಾಜಪ್ಪ (56) ಎಂದು ಗುರುತಿಸಲಾಗಿದೆ.
ಅವರು ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತಿನ ಹಾಗೂ ನಿಷ್ಠಾವಂತ ಶಿಕ್ಷಕರಾಗಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.
ಭಾನುವಾರ ರಾತ್ರಿ ನಾಗರಾಜಪ್ಪ ಅವರು ತಮ್ಮ ಮನೆಯ ಮುಂಭಾಗದಲ್ಲಿ ನಿಂತಿದ್ದ ವೇಳೆ ಏಕಾಏಕಿ ಭಾರೀ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರ ಶಬ್ದಕ್ಕೆ ಬೆಚ್ಚಿಬಿದ್ದ ಅವರು ತಕ್ಷಣವೇ ಅಸ್ವಸ್ಥಗೊಂಡಿದ್ದು, ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕುಟುಂಬಸ್ಥರು ನೆರವಿಗೆ ಧಾವಿಸಿದರೂ ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಯ ಸುದ್ದಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ನಾಗರಾಜಪ್ಪ ಅವರ ನಿಧನಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಣ ವಲಯದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.