ಡೈಲಿವಾರ್ತೆ: 17/ಮೇ/2026

ಸಾಲದ ಹಣ ವಾಪಸ್ ಕೇಳಲು ಹೋದ ದಂಪತಿ ಮೇಲೆ ಮಾರಣಾಂತಿಕ ಹಲ್ಲೆ: ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

​ಕಾಪು: ಸಾಲ ನೀಡಿದ್ದ ಹಣವನ್ನು ವಾಪಸ್ ಕೇಳಲು ಹೋದ ದಂಪತಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಬ್ಬಿಣದ ರಾಡ್ ಹಾಗೂ ಗ್ಯಾಸ್ ಪೈಪ್ ರೆಗ್ಯುಲೇಟರ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಮೂಳೂರು ಗ್ರಾಮದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಗಂಭೀರ ಕರಾರುಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

​ಘಟನೆಯ ಹಿನ್ನೆಲೆ:
​ಕುರ್ಕಾಲು ಗ್ರಾಮದ ಸೈಂಟ್ ಜಾನ್ ಚರ್ಚ್ ಎದುರಿನ ನಿವಾಸಿ ಕ್ಲೇಮೆಂತಿನ ಕ್ರಿಸ್ತಬೆಲ್ ಕೈರನ್ನ (50) ಮತ್ತು ಅವರ ಪತಿ ಎಡ್ವೀನ್ ಚಾರ್ಲ್ಸ್ ಕೈರನ್ನ ಅವರು ಮೇ 15ರಂದು ಸಂಜೆ 5:00 ಗಂಟೆಯ ಸುಮಾರಿಗೆ ಮೂಳೂರು ಗ್ರಾಮದಲ್ಲಿರುವ ಆರೋಪಿ ವಸಂತ ಕೈರುನ್ನ ಅವರ ಮನೆಗೆ ತೆರಳಿದ್ದರು. ಎಡ್ವೀನ್ ಚಾರ್ಲ್ಸ್ ಅವರಿಗೆ ವಸಂತ ಕೈರುನ್ನ ಅವರು ನೀಡಬೇಕಾಗಿದ್ದ ಹಣದ ವಿಚಾರವಾಗಿ ಮಾತನಾಡಲು ಹೋದಾಗ ಈ ರಕ್ತಸಿಕ್ತ ಘಟನೆ ಸಂಭವಿಸಿದೆ.
​ಹಣ ವಾಪಸ್ ಕೇಳುತ್ತಿದ್ದಂತೆ ಆಕ್ರೋಶಗೊಂಡ 1ನೇ ಆರೋಪಿ ವಸಂತ ಕೈರುನ್ನ, ಹಣವನ್ನು ವಾಪಸ್ ನೀಡುವುದಿಲ್ಲ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಅರಚಾಡುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಪಕ್ಕದಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಎಡ್ವೀನ್ ಅವರಿಗೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ಕ್ಲೇಮೆಂತಿನ ಅವರು ತಡೆಯಲು ಹೋದಾಗ, ಆರೋಪಿ ಎಡ್ವೀನ್ ಅವರಿಗೆ ಕೈಯಿಂದ ತೀವ್ರವಾಗಿ ಥಳಿಸಿದ್ದಾನೆ.


​ಇದೇ ವೇಳೆ ಜಗಳ ಬಿಡಿಸಲು ಮುಂದಾದ ಫಿರ್ಯಾದಿದಾರರ ಮೇಲೆ 1ನೇ ಆರೋಪಿಯ ಇಂಟರ್‌ಲಾಕ್ ಕೆಲಸದಾಕೆಯಾದ 2ನೇ ಆರೋಪಿ ಗಿರಿಜಾ ಎಂಬಾಕೆ ಜರಗಿದ್ದಾಳೆ. ಕ್ಲೇಮೆಂತಿನ ಅವರಿಗೆ ಅಶ್ಲೀಲವಾಗಿ ಬೈದು, ಅಲ್ಲೇ ಇದ್ದ ಗ್ಯಾಸ್ ಪೈಪ್ ರೆಗ್ಯುಲೇಟರ್‌ನಿಂದ ಅವರ ಎಡಕೈಗೆ ಪದೇ ಪದೇ ಬಲವಾಗಿ ಜಜ್ಜಿದ್ದಾಳೆ. ಅಷ್ಟೇ ಅಲ್ಲದೆ, ಕಬ್ಬಿಣದ ಮುಳ್ಳುಗಳಿದ್ದ ಭೀಕರ ವಸ್ತುವಿನಿಂದ ಕ್ಲೇಮೆಂತಿನ ಅವರ ತಲೆಗೆ ಹೊಡೆದು ಗಂಭೀರವಾಗಿ ರಕ್ತಗಾಯಗೊಳಿಸಿದ್ದಾಳೆ.
ಇನ್ನೊಮ್ಮೆ ಹಣ ಕೇಳಲು ಬಂದರೆ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಆರೋಪಿ ವಸಂತ ಕೈರುನ್ನ ದಂಪತಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

​ಹಣಕಾಸಿನ ತಕರಾರಿನ ಹಿನ್ನೆಲೆಯಲ್ಲಿ ನಡೆದಿರುವ ಈ ಭೀಕರ ಹಲ್ಲೆಯ ಕುರಿತು ಗಾಯಾಳು ಕ್ಲೇಮೆಂತಿನ ಕ್ರಿಸ್ತಬೆಲ್ ಕೈರನ್ನ ಅವರು ನೀಡಿದ ದೂರಿನ ಮೇರೆಗೆ ಕಾಪು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
​ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ: 59/2026 ಕಲಂಗಳು: 115(2), 118(1), 352, 351(2) ಜೊತೆಗೆ 3(5) BNS (ಭಾರತೀಯ ನ್ಯಾಯ ಸಂಹಿತೆ) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.