ಡೈಲಿವಾರ್ತೆ: 18/ಮೇ/2026

ಕೋಟೇಶ್ವರದಲ್ಲಿ ಮೇ 21ರಂದು ‘ಚಿರಂತನ ಶಿಕ್ಷಣ ಸಂಸ್ಥೆ’ ಲೋಕಾರ್ಪಣೆ – ಡಾ. ಚಿಂತನ ರಾಜೇಶ್

​ಕುಂದಾಪುರ: ಸುಲೋಚನಾ ಸರ್ವೋತ್ತಮ ಎಜ್ಯುಕೇಶನಲ್ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ಚಿರಂತನ ಶಿಕ್ಷಣ ಸಂಸ್ಥೆಗಳು’ ಇದರ ಸರಳ ಉದ್ಘಾಟನಾ ಸಮಾರಂಭವು ಇದೇ ಬರುವ ಮೇ 21, 2026ರಂದು ಜರುಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ಡಾ. ಚಿಂತನ ರಾಜೇಶ್ ತಿಳಿಸಿದ್ದಾರೆ.

​ಮೇ 18ರಂದು ಕೋಟೇಶ್ವರದ ಲೋಟಸ್ ಎಡ್ಜ್ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಬದುಕಿಗೆ ಪೂರಕವಾದ ಸಮಗ್ರ ಶಿಕ್ಷಣ, ಗುಣಮಟ್ಟದ ಶಿಕ್ಷಕರ ತರಬೇತಿ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಅಗತ್ಯತೆಗಳನ್ನು ಒಂದೇ ಸೂರಿನಡಿ ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ವಿವರಿಸಿದರು.

​ಸಂಸ್ಥೆಯ ಪ್ರಮುಖ ಸೇವೆಗಳು ಮತ್ತು ಕೋರ್ಸ್‌ಗಳು

​ಫೌಂಡೇಶನ್ ಶಾಲೆ (ಪ್ರೀ ಸ್ಕೂಲ್): ಮಗುವಿನ ಜೀವನದ ಆರಂಭಿಕ 2000 ದಿನಗಳ ಬೌದ್ಧಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ವೈಜ್ಞಾನಿಕ ಕಲಿಕಾ ಮಾದರಿಯೊಂದಿಗೆ ಮಗುಸ್ನೇಹಿ ವಿಶಿಷ್ಟ ಕ್ಯಾಂಪಸ್‌ನಲ್ಲಿ ಶಿಕ್ಷಣ ನೀಡಲಾಗುವುದು.

ಪ್ರಿ-ಸ್ಕೂಲ್ ಟೀಚರ್ಸ್ ಟ್ರೇನಿಂಗ್ ಕೋರ್ಸ್: ಪ್ರೀ-ಸ್ಕೂಲ್ ಹಂತದಲ್ಲಿ ಬೋಧಿಸುವ ಶಿಕ್ಷಕರನ್ನು ಸಿದ್ಧಪಡಿಸಲು ಉನ್ನತ ಗುಣಮಟ್ಟದ ತರಬೇತಿ ನೀಡಲಾಗುತ್ತದೆ. ಪಿಯುಸಿ/ಡಿಗ್ರಿ ಆದವರಿಗೆ ಮಾತ್ರವಲ್ಲದೆ, ಈ ವರ್ಷದಿಂದ ಎಸ್‌ಎಸ್‌ಎಲ್‌ಸಿ ಮುಗಿಸಿದವರಿಗೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 2 ಬ್ಯಾಚ್‌ಗಳು ಯಶಸ್ವಿಯಾಗಿ ತರಬೇತಿ ಮುಗಿಸಿ 100% ಉದ್ಯೋಗ ಪಡೆದಿದ್ದು, ಪ್ರಸ್ತುತ 3ನೇ ವರ್ಷದ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಉದ್ಯೋಗದಲ್ಲಿ ಇರುವವರಿಗೆ ಮತ್ತು ಇಲ್ಲದವರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಇದ್ದು, ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ.

ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ‘ಇನ್-ಸರ್ವಿಸ್’ (In-service) ಮತ್ತು ‘ಪ್ರಿ-ಸರ್ವಿಸ್’ (Pre-service) ಪುನಶ್ವೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
​ಮಕ್ಕಳ ಮತ್ತು ಹದಿಹರೆಯದವರ ಮಾರ್ಗದರ್ಶನ ಕೇಂದ್ರ: ಇಂದಿನ ಅಗತ್ಯಕ್ಕೆ ತಕ್ಕಂತೆ ಶಾಲಾ ಆಧಾರಿತ ವಿಶೇಷ ಆಪ್ತ ಸಮಾಲೋಚನೆ (Counseling) ಹಾಗೂ ವೃತ್ತಿಪರ ಮಾರ್ಗದರ್ಶನವನ್ನು ಈ ಕೇಂದ್ರ ನೀಡಲಿದೆ.
​ವೃತ್ತಿಪರ ಆಪ್ತ ಸಮಾಲೋಚನೆ ಕೋರ್ಸ್‌ಗಳು: ಭವಿಷ್ಯದಲ್ಲಿ ಹೆಚ್ಚು ಬೇಡಿಕೆಯಿರುವ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ಕ್ಷೇತ್ರಕ್ಕೆ ಪೂರಕವಾದ ವೃತ್ತಿಪರ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ NIOS (National Institute of Open Schooling) ವಿಭಾಗಗಳನ್ನು ಸಂಸ್ಥೆಗೆ ಸೇರಿಸುವ ಆಶಯವನ್ನು ಹೊಂದಲಾಗಿದೆ.

​ಮೇ 21ರಂದು ಉದ್ಘಾಟನಾ ಸಮಾರಂಭ:

​ನೂತನ ಸಂಸ್ಥೆಯ ಉದ್ಘಾಟನೆಯನ್ನು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು/ಸಂಚಾಲಕರು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಸೈಕಿಯಾಟ್ರಿಸ್ಟ್ ಹಾಗೂ ಮೆಡಿಕಲ್ ಆಫೀಸರ್ ಡಾ. ಪ್ರಕಾಶ್ ತೋಳಾರ್, ಕುಂದಾಪುರ ಬ್ಲಾಕ್ ಎಜುಕೇಶನ್ ಆಫೀಸರ್ ಶ್ರೀಮತಿ ಶೋಭಾ ಶೆಟ್ಟಿ ಹಾಗೂ ಮೊಳಹಳ್ಳಿಯ ಉದ್ಯಮಿ ಶ್ರೀ ಕಮಲ ಕಿಶೋರ್ ಹೆಗ್ಡೆ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

​ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕಿ ಡಾ. ಚಿಂತನ ರಾಜೇಶ್, ಅಕಾಡೆಮಿಕ್ ಲೀಡ್ ಶ್ರೀಮತಿ ವಿಲ್ಮಾ ಡಿಸಿಲ್ವಾ ಮತ್ತು ಪ್ರಾಂಶುಪಾಲರಾದ ಶ್ರೀಮತಿ ವಿನುತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.