



ಡೈಲಿವಾರ್ತೆ: 19/ಮೇ/2026

ದೇಶದ ಜನತೆಗೆ ಮತ್ತೊಂದು ದುಬಾರಿ ಶಾಕ್: ವಾರದಲ್ಲೇ ಎರಡನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ 90 ಪೈಸೆ ಏರಿಕೆ

ನವದೆಹಲಿ: ದೇಶದ ಜನತೆಗೆ ಬೆಳ್ಳಂಬೆಳಗ್ಗೆ ಮತ್ತೊಂದು ದುಬಾರಿ ಶಾಕ್ ಎದುರಾಗಿದೆ. ಮಂಗಳವಾರ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 90 ಪೈಸೆ ಹೆಚ್ಚಳ ಮಾಡಿದ್ದು, ಕೇವಲ ಒಂದು ವಾರದೊಳಗೆ ಇದು ಎರಡನೇ ಬಾರಿ ದರ ಏರಿಕೆಯಾಗಿದೆ.
ಇದಕ್ಕೂ ಮೊದಲು ಮೇ 15ರಂದು ತೈಲ ಕಂಪನಿಗಳು ಏಕಾಏಕಿ ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಳ ಮಾಡಿದ್ದವು. ಇದೀಗ ಮೂರು ದಿನಗಳ ಅಂತರದಲ್ಲೇ ಮತ್ತೊಮ್ಮೆ ದರ ಹೆಚ್ಚಳ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ದರ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 97.77 ರೂಪಾಯಿಗೆ ತಲುಪಿದರೆ, ಡೀಸೆಲ್ ದರ 90.67 ರೂಪಾಯಿಗೆ ಏರಿಕೆಯಾಗಿದೆ.
ಮಾರುಕಟ್ಟೆ ವಿಶ್ಲೇಷಕರು ಹಾಗೂ ಕೈಗಾರಿಕಾ ಮೂಲಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಉದ್ಭವಿಸಿರುವ ರಾಜತಾಂತ್ರಿಕ ಮತ್ತು ಮಿಲಿಟರಿ ಬಿಕ್ಕಟ್ಟಿನ ಪರಿಣಾಮವೇ ಈ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಿದಂತೆ ಜಗತ್ತಿನ ಅತಿ ಮಹತ್ವದ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಪೂರೈಕೆಗೆ ಅಡ್ಡಿ ಉಂಟಾಗುವ ಭೀತಿ ಎದುರಾಗಿದೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ಗಡಿಯನ್ನು ದಾಟಿದೆ ಎಂದು ತಿಳಿದುಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದ ಭಾರತೀಯ ತೈಲ ಸಂಸ್ಕರಣಾ ಕಂಪನಿಗಳ ಮೇಲೂ ಭಾರೀ ಆರ್ಥಿಕ ಒತ್ತಡ ನಿರ್ಮಾಣವಾಗಿದೆ. ಕಳೆದ ವಾರದ 3 ರೂಪಾಯಿ ಏರಿಕೆಯಿಂದ ಕಂಪನಿಗಳ ನಷ್ಟದಲ್ಲಿ ಶೇ.25 ರಷ್ಟು ಇಳಿಕೆ ಕಂಡುಬಂದಿದ್ದರೂ, ನಿರಂತರ ಏರಿಕೆಯಾಗುತ್ತಿರುವ ಕಚ್ಚಾತೈಲ ದರದ ಹಿನ್ನೆಲೆ ಇದೀಗ ಮತ್ತೆ ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಇಂಧನ ದರ ಏರಿಕೆಯ ಪರಿಣಾಮ ಸಾರಿಗೆ, ಆಹಾರ ವಸ್ತುಗಳು ಹಾಗೂ ದೈನಂದಿನ ಬಳಕೆಯ ವಸ್ತುಗಳ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಮಧ್ಯಮ ಹಾಗೂ ಬಡ ವರ್ಗದ ಜನತೆಗೆ ಈ ಬೆಳವಣಿಗೆ ಮತ್ತಷ್ಟು ಆರ್ಥಿಕ ಹೊರೆ ತಂದೊಡ್ಡಿದೆ.
ಜಾಗತಿಕ ರಾಜಕೀಯ ಬಿಕ್ಕಟ್ಟು ದೇಶೀಯ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತವೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ.