ಡೈಲಿವಾರ್ತೆ: 19/ಮೇ/2026

ಮಂಗಳೂರು: ಕಾವೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ – ಮೂರು ಮನೆಗಳ ಬಾವಿಗಳಲ್ಲಿ ಡೀಸೆಲ್ ಅಂಶ ಪತ್ತೆ, ಅಂತರ್ಜಲ ಕಲುಷಿತ ಭೀತಿ

ಮಂಗಳೂರು: ಮಂಗಳೂರಿನ ಕಾವೂರು ಪ್ರದೇಶದಲ್ಲಿ ಅತ್ಯಂತ ಆಘಾತಕಾರಿ ಹಾಗೂ ಅಪಾಯಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾವೂರಿನ ಮೂರು ಮನೆಗಳ ಬಾವಿಗಳಲ್ಲಿ ದಿಢೀರನೆ ಡೀಸೆಲ್ ಮಿಶ್ರಿತ ನೀರು ಮೇಲೇಳುತ್ತಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ.
ಆರೋಗ್ಯ ಇಲಾಖೆಯ ವತಿಯಿಂದ ಸಂಗ್ರಹಿಸಲಾದ ಬಾವಿ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ನೀರಿನಲ್ಲಿ ಬರೋಬ್ಬರಿ ಶೇ.28 ರಷ್ಟು ಡೀಸೆಲ್ ಅಂಶ ಇರುವುದಾಗಿ ವರದಿಯಲ್ಲಿ ದೃಢಪಟ್ಟಿದೆ. ಇದರಿಂದ ಕಾವೂರು ಭಾಗದ ಅಂತರ್ಜಲ ಸಂಪೂರ್ಣ ಕಲುಷಿತಗೊಳ್ಳುವ ಭೀತಿ ಎದುರಾಗಿದೆ.

ಸ್ಥಳೀಯರ ಪ್ರಕಾರ, ಬಾವಿಯ ನೀರನ್ನು ಹಲವು ಬಾರಿ ಮೋಟಾರ್ ಮೂಲಕ ಸಂಪೂರ್ಣ ಖಾಲಿ ಮಾಡಿಸಿದರೂ ಸಹ, ಮತ್ತೆ ನೀರಿನೊಂದಿಗೆ ದಪ್ಪನೆಯ ಡೀಸೆಲ್ ಪದರ ಮೇಲೇಳುತ್ತಿದೆ. ಬಾವಿಯಿಂದ ತೆಗೆದ ನೀರಿಗೆ ಕಾಗದ ಮುಳುಗಿಸಿ ಬೆಂಕಿ ಹಚ್ಚಿದಾಗ ಅದು ತಕ್ಷಣವೇ ಉರಿಯುತ್ತಿರುವ ದೃಶ್ಯಗಳು ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ.

ಸಂತ್ರಸ್ತ ಕುಟುಂಬಗಳ ಮನೆಗಳ ಸಮೀಪದಲ್ಲೇ ಪೆಟ್ರೋಲ್ ಬಂಕ್ ಇರುವ ಹಿನ್ನೆಲೆ, ಅದರ ಅಂಡರ್‌ಗ್ರೌಂಡ್ ಟ್ಯಾಂಕ್‌ನಿಂದ ಡೀಸೆಲ್ ಸೋರಿಕೆ ಆಗಿ ಭೂಗರ್ಭ ಜಲ ಸೇರಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಪೆಟ್ರೋಲ್ ಬಂಕ್ ಮಾಲೀಕರು ಈ ಆರೋಪವನ್ನು ತಳ್ಳಿಹಾಕಿದ್ದು, ನಮ್ಮ ಟ್ಯಾಂಕ್‌ನಿಂದ ಯಾವುದೇ ಸೋರಿಕೆ ಆಗಿಲ್ಲ. ಡೀಸೆಲ್ ಸ್ಟಾಕ್‌ನಲ್ಲೂ ವ್ಯತ್ಯಾಸ ಕಂಡುಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇತ್ತ ಬಾವಿ ನೀರು ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದ್ದರೂ, ಸ್ಥಳೀಯ ಆಡಳಿತ ಹಾಗೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಗ್ರ ಪರಿಶೀಲನೆ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತ್ರಸ್ತರಾದ ಸದಾಶಿವ ಮಾತನಾಡಿ ಮೊದಲು ನೀರಿಗೆ ವಿಚಿತ್ರ ವಾಸನೆ ಬರುತ್ತಿತ್ತು. ಬಳಿಕ ಬಾವಿಯ ನೀರಿನಲ್ಲಿ ಡೀಸೆಲ್ ಮಿಶ್ರಣವಾಗಿರುವುದು ಗೊತ್ತಾಯಿತು. ಎಷ್ಟು ಬಾರಿ ಸ್ವಚ್ಛಗೊಳಿಸಿದರೂ ಮತ್ತೆ ಆಯಿಲ್ ಬರುತ್ತಿದೆ. ಈಗ ನಾವು ಟ್ಯಾಂಕರ್ ನೀರಿನ ಮೇಲೆಯೇ ಅವಲಂಬಿತರಾಗಿದ್ದೇವೆ. ಕುಡಿಯುವ ನೀರು ಇರಲಿ, ದಿನನಿತ್ಯದ ಬಳಕೆಯಿಗೂ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಅವರು ಮುಂದುವರಿದು, ಬಾವಿಯಿಂದ ತೆಗೆದ ನೀರಿಗೆ ಬೆಂಕಿ ಹಚ್ಚಿದರೆ ಉರಿಯುತ್ತಿದೆ. ಇದು ಜೀವಕ್ಕೆ ಅಪಾಯಕಾರಿಯಾದ ಪರಿಸ್ಥಿತಿ. ಅಧಿಕಾರಿಗಳು ವರದಿ ಪಡೆದು ಮೌನವಾಗಿರದೆ ತಕ್ಷಣ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ನಡುವೆ, ಕಾವೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಅಂತರ್ಜಲ ಕಲುಷಿತಗೊಂಡಿದೆಯೇ ಎಂಬ ಆತಂಕ ಮನೆ ಮಾಡಿದ್ದು, ತಕ್ಷಣವೇ ವೈಜ್ಞಾನಿಕ ಪರಿಶೀಲನೆ ನಡೆಸಿ ಸೋರಿಕೆಯ ಮೂಲ ಪತ್ತೆಹಚ್ಚಬೇಕೆಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.