




ಡೈಲಿವಾರ್ತೆ: 23/ಮೇ/2026


ಈದ್ ಕುರ್ಬಾನಿಗೆ ಸಜ್ಜಾದ ‘ಡೊನಾಲ್ಡ್ ಟ್ರಂಪ್’ಎಮ್ಮೆ: ಬಾಂಗ್ಲಾದೇಶದಲ್ಲಿ ವೈರಲ್ ಆದ ಅಪರೂಪದ ಅಲ್ಬಿನೋ ದೈತ್ಯ ಜಾನುವಾರು

ಢಾಕಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೇಶವಿನ್ಯಾಸವನ್ನು ಹೋಲುವ ವಿಶಿಷ್ಟ ಹೊಂಬಣ್ಣದ ಕೂದಲಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದ ಅಪರೂಪದ ಬಿಳಿ ಅಲ್ಬಿನೋ ಎಮ್ಮೆ ಇದೀಗ ಬಾಂಗ್ಲಾದೇಶದಲ್ಲಿ ನಡೆಯಲಿರುವ ಈದ್-ಉಲ್-ಅದ್ಹಾ ಹಬ್ಬದ ಕುರ್ಬಾನಿಗೆ ಸಜ್ಜಾಗಿದೆ.
ಢಾಕಾ ಸಮೀಪದ ನಾರಾಯಣಗಂಜ್ ಪ್ರದೇಶದ ಖಾಸಗಿ ಫಾರ್ಮ್‌ನಲ್ಲಿ ಸಾಕಲ್ಪಟ್ಟಿರುವ ಸುಮಾರು 700 ಕೆಜಿ ತೂಕದ ಈ ದೈತ್ಯ ಎಮ್ಮೆ ತನ್ನ ವಿಶಿಷ್ಟ ರೂಪದ ಕಾರಣ ದೇಶದಾದ್ಯಂತ ಭಾರಿ ಜನಪ್ರಿಯತೆ ಪಡೆದಿದೆ. ಎಮ್ಮೆಯ ಹಣೆಯ ಮೇಲಿನ ಹೊಂಬಣ್ಣದ ಕೂದಲಿನ ವಿನ್ಯಾಸ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೈಲಿಯನ್ನು ಹೋಲುವುದರಿಂದ ಫಾರ್ಮ್ ಮಾಲೀಕರು ಇದಕ್ಕೆ ‘ಡೊನಾಲ್ಡ್ ಟ್ರಂಪ್’ ಎಂಬ ಹೆಸರಿಟ್ಟಿದ್ದಾರೆ.
ಫಾರ್ಮ್ ಮಾಲೀಕ ಜಿಯಾವುದ್ದೀನ್ ಮೃಧಾ ಮಾತನಾಡಿ, “ಈದ್-ಉಲ್-ಅದ್ಹಾ ಹಬ್ಬದ ಧಾರ್ಮಿಕ ತ್ಯಾಗದ ಅಂಗವಾಗಿ ಎಮ್ಮೆ ಈಗಾಗಲೇ ಗ್ರಾಹಕರೊಬ್ಬರಿಗೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಹಲವು ವರ್ಷಗಳಿಂದ ಅತ್ಯಂತ ಕಾಳಜಿಯಿಂದ ಸಾಕಿದ ಈ ಪ್ರಾಣಿಯಿಂದ ದೂರವಾಗುವುದು ನೋವು ತಂದರೂ, ಕುರ್ಬಾನಿಯೇ ಹಬ್ಬದ ನಿಜವಾದ ಆಧ್ಯಾತ್ಮಿಕ ಸಂದೇಶವಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕು ವರ್ಷ ಪ್ರಾಯದ ಈ ಅಪರೂಪದ ಎಮ್ಮೆಯನ್ನು ನೋಡಲು ಪ್ರತಿದಿನ ಸಾವಿರಾರು ಜನರು ವಿವಿಧ ಜಿಲ್ಲೆಗಳಿಂದ ಫಾರ್ಮ್‌ಗೆ ಆಗಮಿಸುತ್ತಿದ್ದರು. ಸೆಲ್ಫಿ ಮತ್ತು ವಿಡಿಯೋಗಳಿಗಾಗಿ ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಎಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿ ಮಟ್ಟದ ಖ್ಯಾತಿ ಪಡೆದಿತ್ತು.ಆದರೆ ನಿರಂತರ ಸಾರ್ವಜನಿಕ ಆಗಮನ ಮತ್ತು ಗದ್ದಲದಿಂದ ಪ್ರಾಣಿಗೆ ಮಾನಸಿಕ ಒತ್ತಡ ಉಂಟಾಗಿ ತೂಕ ಕಡಿಮೆಯಾಗತೊಡಗಿದ ಕಾರಣ, ಅದರ ಆರೋಗ್ಯದ ಹಿತದೃಷ್ಟಿಯಿಂದ ಫಾರ್ಮ್ ಆಡಳಿತ ಸಾರ್ವಜನಿಕ ವೀಕ್ಷಣೆಯನ್ನು ನಿರ್ಬಂಧಿಸಿತು. ಎಮ್ಮೆಯ ಆರೈಕೆಗೆ ದಿನಕ್ಕೆ ನಾಲ್ಕು ಬಾರಿ ತಣ್ಣೀರಿನ ಸ್ನಾನ ಹಾಗೂ ವಿಶೇಷ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಪಶುಸಂಗೋಪನಾ ಅಧಿಕಾರಿಗಳ ಪ್ರಕಾರ, ದೇಹದಲ್ಲಿ ಮೆಲನಿನ್ ಅಂಶದ ಕೊರತೆಯಿಂದ ಉಂಟಾಗುವ ಅಲ್ಬಿನೋ ತಳಿಯ ಜಾನುವಾರುಗಳು ಬಾಂಗ್ಲಾದೇಶದ ಹವಾಮಾನ ಪರಿಸ್ಥಿತಿಯಲ್ಲಿ ಅತ್ಯಂತ ಅಪರೂಪ. ತಿಳಿ ಚರ್ಮ, ಗುಲಾಬಿ ಮೂಗು ಮತ್ತು ಹೊಂಬಣ್ಣದ ಕೂದಲು ಇಂತಹ ಜಾನುವಾರುಗಳ ವಿಶೇಷ ಲಕ್ಷಣಗಳಾಗಿವೆ.
ಈದ್-ಉಲ್-ಅದ್ಹಾ ಹಬ್ಬದ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ಲಕ್ಷಾಂತರ ಜಾನುವಾರುಗಳನ್ನು ಕುರ್ಬಾನಿ ನೀಡುವ ಸಂಪ್ರದಾಯವಿದ್ದು, ಇತ್ತೀಚಿನ ವರ್ಷಗಳಲ್ಲಿ ಅಪರೂಪದ ಹಾಗೂ ದೈತ್ಯಾಕಾರದ ಜಾನುವಾರುಗಳು ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಗಮನ ಸೆಳೆಯುತ್ತಿವೆ. ‘ಟ್ರಂಪ್’ ಎಮ್ಮೆ ಇದೀಗ ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದ್ದು, ಈ ವರ್ಷದ ಈದ್ ಹಬ್ಬದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ.