ಡೈಲಿವಾರ್ತೆ: 23/ಮೇ/2026

ಪಶ್ಚಿಮ ಬಂಗಾಳದಲ್ಲಿ ಜಾನುವಾರು ವಧೆ ನಿಷೇಧದ ಬಿರುಗಾಳಿ: ಮುಸ್ಲಿಮರ ಸಮ್ಮತಿ, ಹಿಂದೂ ರೈತರ ಆಕ್ಷೇಪ! ಗ್ರಾಮೀಣ ಆರ್ಥಿಕತೆ ಉಡೀಸ್?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವು ಜಾನುವಾರು ವಧೆ ನಿಷೇಧ ಕಾಯ್ದೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು, ರಾಜ್ಯದ ಗ್ರಾಮೀಣ ಆರ್ಥಿಕತೆ ಹಾಗೂ ಜಾನುವಾರು ವ್ಯಾಪಾರದ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ. ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರವು ಅಧಿಕಾರ ಸ್ವೀಕರಿಸಿದ ತಕ್ಷಣವೇ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, 1950ರ ಕಾನೂನು ಮತ್ತು ಕಲ್ಕತ್ತಾ ಹೈಕೋರ್ಟ್‌ನ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿದೆ. ಮುಂಬರುವ ಬಕ್ರೀದ್ ಹಬ್ಬದ ಸಂದರ್ಭದಲ್ಲೇ ಈ ಕಠಿಣ ನಿಯಮಗಳು ಜಾರಿಗೆ ಬಂದಿದ್ದು, ಇದಕ್ಕೆ ತಡೆ ನೀಡಲು ಕಲ್ಕತ್ತಾ ಹೈಕೋರ್ಟ್ ನಿರಾಕರಿಸಿದೆ.

ಕಠಿಣ ನಿಯಮಗಳು ಮತ್ತು ಹೈಕೋರ್ಟ್ ಆದೇಶ: ಮೇ 13ರಂದು ಹೊರಡಿಸಲಾದ ಹೊಸ ಸರ್ಕಾರಿ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಜಾನುವಾರುಗಳನ್ನು (ಎತ್ತು, ಹೋರಿ, ಹಸು, ಕರು ಮತ್ತು ಎಮ್ಮೆ) ವಧೆ ಮಾಡುವಂತಿಲ್ಲ. ಒಂದು ವೇಳೆ ವಯಸ್ಸಾದ ಜಾನುವಾರುಗಳನ್ನು ವಧೆ ಮಾಡಬೇಕಾದರೂ, ಅವು ವಧೆಗೆ ಯೋಗ್ಯವಾಗಿವೆ ಎಂದು ಪಶುವೈದ್ಯರು ಹಾಗೂ ಸ್ಥಳೀಯ ಪುರಸಭೆಯ ಅಧ್ಯಕ್ಷರು ಅಥವಾ ಪಂಚಾಯತ್ ಮುಖ್ಯಸ್ಥರು ಜಂಟಿ ಪ್ರಮಾಣಪತ್ರ ನೀಡುವುದು ಕಡ್ಡಾಯಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಇಂತಹ ಪ್ರಾಣಿಗಳನ್ನು ಕೇವಲ ಸರ್ಕಾರ ಅನುಮೋದಿಸಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಈ ಕಠಿಣ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ಅವರನ್ನೊಳಗೊಂಡ ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ವಜಾಗೊಳಿಸಿದೆ. ಸರ್ಕಾರದ ಈ ಆದೇಶವು 2018ರಲ್ಲಿ ನ್ಯಾಯಾಲಯವೇ ನೀಡಿದ್ದ ನಿರ್ದೇಶನಗಳಿಗೆ ಪೂರಕವಾಗಿರುವುದರಿಂದ, ಇದರಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರಗಳಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಮುಸ್ಲಿಂ ಸಂಘಟನೆಗಳ ಒಪ್ಪಿಗೆ: ಹಿಂದೂ ರೈತರಿಂದ ಆಕ್ಷೇಪ

ಸಾಮಾನ್ಯವಾಗಿ ಇಂತಹ ನಿರ್ಧಾರಗಳಿಗೆ ಮುಸ್ಲಿಂ ಸಮುದಾಯದಿಂದ ವಿರೋಧ ವ್ಯಕ್ತವಾಗುವುದು ವಾಡಿಕೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಸಂಘಟನೆಗಳು ಸೇರಿದಂತೆ ಎಲ್ಲರೂ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದು, ತಮ್ಮ ಹಬ್ಬಗಳಲ್ಲಿ ಗೋ ಹತ್ಯೆ ಮಾಡುವುದಿಲ್ಲ ಎಂದು ಪ್ರಕಟಿಸಿದ್ದಾರೆ.
ಆದರೆ, ಅಚ್ಚರಿಯ ಬೆಳವಣಿಗೆಯಾಗಿ ಸ್ಥಳೀಯ ಹಿಂದೂ ರೈತರು ಮತ್ತು ವ್ಯಾಪಾರಿಗಳು ಈ ಕಾಯ್ದೆಯ ವಿರುದ್ಧ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಈ ಕಾಯ್ದೆಯು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಜನರ ಜೀವನಾಧಾರದ ಮೇಲೆ ತೀವ್ರ ಸ್ವರೂಪದ ಹೊಡೆತ ನೀಡಿದೆ ಎಂಬುದು ಆಕ್ರೋಶಕ್ಕೆ ಅಸಲಿ ಕಾರಣವಾಗಿದೆ.

ಕಳೆಗುಂದಿದ ಮಾರುಕಟ್ಟೆಗಳು: ಆತಂಕದಲ್ಲಿ ಹೈನುಗಾರರು
ಹೊಸ ನಿಯಮಾವಳಿಗಳಿಂದಾಗಿ ಬಂಗಾಳದಾದ್ಯಂತ ಇರುವ ಜಾನುವಾರು ಮಾರುಕಟ್ಟೆಗಳು ಸಂಪೂರ್ಣವಾಗಿ ಕಳೆಗುಂದಿವೆ. ಹಬ್ಬದ ಸಂದರ್ಭದಲ್ಲಿ ಜಾನುವಾರುಗಳನ್ನು ಮಾರಾಟ ಮಾಡಿ ವರ್ಷದ ಬಹುದೊಡ್ಡ ಆದಾಯ ಗಳಿಸುತ್ತಿದ್ದ ಹೈನುಗಾರರು ಮತ್ತು ವ್ಯಾಪಾರಿಗಳು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನಂಪ್ರತಿ ಸುಮಾರು 2,000 ಹಸುಗಳನ್ನು ಮಾರಾಟ ಮಾಡುತ್ತಿದ್ದ ಪ್ರಸಿದ್ಧ ‘ಪೋಲೆರ್ಹತ್ ಗೋರು ಹಾತ್’ ಮಾರುಕಟ್ಟೆಯಲ್ಲಿ ಈಗ ಹಬ್ಬದ ಸನಿಹದಲ್ಲೂ ಕೇವಲ ಒಂದೆರಡು ಡಜನ್ ಜಾನುವಾರುಗಳು ಮಾತ್ರ ಕಾಣ ಸಿಗುತ್ತಿವೆ.

ಗ್ರಾಮೀಣ ಭಾಗದಲ್ಲಿ ವಯಸ್ಸಾದ ಮತ್ತು ಹಾಲಿನ ಉತ್ಪಾದನೆ ನಿಲ್ಲಿಸಿದ ಜಾನುವಾರುಗಳನ್ನು ಸಾಕುವುದು ರೈತರಿಗೆ ಆರ್ಥಿಕವಾಗಿ ಭಾರಿ ಹೊರೆಯಾಗುತ್ತಿದೆ. ಜಾನುವಾರು ವ್ಯಾಪಾರ, ಮಾಂಸದ ಉದ್ಯಮ, ಸಾಗಣೆದಾರರು, ಚರ್ಮದ ವ್ಯಾಪಾರಿಗಳು ಮತ್ತು ಕಸಾಯಿಖಾನೆ ಕಾರ್ಮಿಕರು ದಿಢೀರನೆ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಡೀ ಗ್ರಾಮೀಣ ಆರ್ಥಿಕ ವ್ಯವಸ್ಥೆಯೇ ತಲ್ಲಣಗೊಂಡಿದೆ. ಸರ್ಕಾರದ ಈ ಕಠಿಣ ನಿಲುವಿನಿಂದಾಗಿ ಮುಂಬರುವ ದಿನಗಳಲ್ಲಿ ವ್ಯಾಪಾರ ವಲಯದ ಬಿಕ್ಕಟ್ಟು ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.