




ಡೈಲಿವಾರ್ತೆ: 23/ಮೇ/2026


ಕರಾವಳಿಗೆ ನ್ಯಾಯದ ಹಕ್ಕು: ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ SDPI ಆಗ್ರಹ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದ ಜನರಿಗೆ ಶೀಘ್ರ ಹಾಗೂ ಸುಲಭ ನ್ಯಾಯ ಒದಗಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠವನ್ನು ತಕ್ಷಣ ಸ್ಥಾಪಿಸಬೇಕು ಎಂದು ಎಸ್‌ಡಿಪಿಐ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗುವ ಒಟ್ಟು ಪ್ರಕರಣಗಳ ಪೈಕಿ ಸುಮಾರು 30 ಶೇಕಡಾ ಪ್ರಕರಣಗಳು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದಲೇ ದಾಖಲಾಗುತ್ತಿವೆ ಎಂದು ತಿಳಿಸಿದ್ದಾರೆ. ಆದರೆ ಈ ಭಾಗದ ಸಾಮಾನ್ಯ ಜನರು ತಮ್ಮ ಪ್ರಕರಣಗಳ ವಿಚಾರಣೆಗೆ ಸುಮಾರು 400 ಕಿಲೋಮೀಟರ್ ದೂರದ ಬೆಂಗಳೂರಿಗೆ ತೆರಳಬೇಕಾಗಿರುವುದು ದೊಡ್ಡ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಒಂದು ಪ್ರಕರಣದ ವಿಚಾರಣೆಗೆ ಹಾಜರಾಗಲು ಬಡ ಹಾಗೂ ಮಧ್ಯಮ ವರ್ಗದ ಕಕ್ಷಿದಾರರು ₹8,000 ರಿಂದ ₹10,000 ವರೆಗೆ ವೆಚ್ಚ ಮಾಡಬೇಕಾಗುತ್ತಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದವರು ನ್ಯಾಯ ಪಡೆಯುವ ಹಾದಿಯಲ್ಲೇ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನ್ಯಾಯ ವಿಳಂಬ ಮಾತ್ರವಲ್ಲ, ನ್ಯಾಯ ನಿರಾಕರಣೆಯ ಸಮಾನ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನ್ಯಾಯ ದೂರದಲ್ಲಿರಬಾರದು, ಜನರ ಬಳಿಯೇ ಸಿಗಬೇಕು ಎಂಬುದು ಕರಾವಳಿ ಭಾಗದ ದಶಕಗಳ ಬೇಡಿಕೆ. ಧಾರವಾಡ ಹಾಗೂ ಕಲಬುರಗಿಯಲ್ಲಿ ಹೈಕೋರ್ಟ್ ಪೀಠಗಳನ್ನು ಸ್ಥಾಪಿಸಿರುವ ಸರ್ಕಾರ ಮತ್ತು ನ್ಯಾಯಾಂಗ, ಮಂಗಳೂರು ಭಾಗವನ್ನು ಮಾತ್ರ ನಿರ್ಲಕ್ಷ್ಯ ಮಾಡಿರುವುದು ತಾರತಮ್ಯ ನೀತಿಯ ಸಂಕೇತವಾಗಿದೆ ಎಂದು ಅವರು ಟೀಕಿಸಿದರು. ಕರಾವಳಿ ಹಾಗೂ ಮಲೆನಾಡು ಭಾಗದ ಆರು ಜಿಲ್ಲೆಗಳ ಜನರಿಗೆ ನ್ಯಾಯಾಂಗ ಸೇವೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ಹಾಗೂ ನ್ಯಾಯಾಂಗ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.