



ಡೈಲಿವಾರ್ತೆ: 03/ಜೂ./2026


ತೆಕ್ಕಟ್ಟೆ: ಬೈಕ್‌ಗೆ ಪಿಕಪ್ ವಾಹನ ಢಿಕ್ಕಿ, ಯುವಕ ದುರ್ಮರಣ

ಕೋಟ, ಜೂನ್ 03: ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಜಂಕ್ಷನ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಬೈಕ್ ಸವಾರ ಗಣೇಶ ಪೂಜಾರಿ ಎಂದು ಗುರುತಿಸಲಾಗಿದೆ.
ಮಲ್ಯಾಡಿ ರಸ್ತೆ ಕಡೆಯಿಂದ ತೆಕ್ಕಟ್ಟೆ ಜಂಕ್ಷನ್ ಮೂಲಕ ಕುಂದಾಪುರ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಸಾಲಿಗ್ರಾಮ ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ
ಪಿಕಪ್ ವಾಹನವನ್ನು ಚಾಲನೆ ಮಾಡುತ್ತಿದ್ದ ವಿಜಯ ಎಂಬವರು ರಸ್ತೆಯ ಎಡಭಾಗಕ್ಕೆ ಬಂದಿದ್ದು, ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಬೈಕ್ ಸಮೇತ ರಸ್ತೆಗೆ ಬಿದ್ದ ಗಣೇಶ ಪೂಜಾರಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರು ಅಸ್ವಸ್ಥ ಸ್ಥಿತಿಗೆ ತಲುಪಿದ್ದರು. ಸ್ಥಳೀಯರು ಹಾಗೂ ಪರಿಚಿತರು ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೋಟ ಸಮೀಪದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಿದರು.
ಆದರೆ ಗಾಯದ ತೀವ್ರತೆಯನ್ನು ಗಮನಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅದರಂತೆ ಅವರನ್ನು ಆದರ್ಶ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆಗೆ ಸಂಬಂಧಿಸಿದಂತೆ ರವಿ (22), ಕುಂಭಾಶಿ ಗ್ರಾಮ ನಿವಾಸಿ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 94/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಹಾಗೂ 106ರಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.