ಡೈಲಿವಾರ್ತೆ: 03/ಜೂ./2026

ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಮಾರ್ಗದರ್ಶಿ ಕಾರ್ಯಗಾರ:
ಸರಿಯಾದ ಗುರಿ, ಸಕಾರಾತ್ಮಕ ಚಿಂತನೆಯಿಂದಲೇ ಯಶಸ್ಸು ಸಾಧ್ಯ: ಮಿತೇಶ್ ಕುಮಾರ್ ಮೂಡುಕೊಣಾಜೆ

ಕುಂದಾಪುರ, ಜೂನ್ 3: ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಸಕಾರಾತ್ಮಕ ಚಿಂತನೆ ಮತ್ತು ನಿರಂತರ ಪರಿಶ್ರಮದ ಮೂಲಕ ಮುಂದುವರಿದಾಗ ಮಾತ್ರ ಯಶಸ್ಸಿನ ಶಿಖರವನ್ನು ತಲುಪಲು ಸಾಧ್ಯ ಎಂದು ವಿದ್ಯಾರ್ಥಿ ತರಬೇತುದಾರ ಹಾಗೂ ಕಾಲೇಜ್ ನೀಟ್ ಫೈಂಡರ್ ಡಾಟ್ ಕಾಂನ ವಿದ್ಯಾರ್ಥಿ ಕಾರ್ಯಕರ್ತ ಶ್ರೀ ಮಿತೇಶ್ ಕುಮಾರ್ ಮೂಡುಕೊಣಾಜೆ ಅಭಿಪ್ರಾಯಪಟ್ಟರು.

ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಅಂಗಸಂಸ್ಥೆಯಾದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಲಾದ ವಿದ್ಯಾರ್ಥಿ ಮಾರ್ಗದರ್ಶಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸುವ ಪೂರಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವಕ್ಕೆ ಕುಂದುಂಟು ಮಾಡುವ ಹಾಗೂ ಗುರಿಯಿಂದ ದಾರಿ ತಪ್ಪಿಸುವ ವಿಷಯಗಳತ್ತ ಗಮನ ಹರಿಸದೆ, ಜೀವನದ ಪ್ರಮುಖ ಉದ್ದೇಶಗಳತ್ತ ಕೇಂದ್ರೀಕರಿಸಬೇಕು. ಸತತ ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಮಾತ್ರ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀ ಕೆ. ಸುಭಾಷ್ಚಂದ್ರ ಶೆಟ್ಟಿಯವರು ಮಾತನಾಡಿ, ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿಗಳ ಬದುಕಿನ ದಿಕ್ಕು ನಿರ್ಧರಿಸುವ ಮಹತ್ವದ ಘಟ್ಟವಾಗಿದೆ. ಉತ್ತಮ ಗುರಿ, ಸ್ಪಷ್ಟ ದೃಷ್ಟಿಕೋನ ಹಾಗೂ ಶೈಕ್ಷಣಿಕ ಬದ್ಧತೆಯ ಮೂಲಕ ವಿದ್ಯಾರ್ಥಿಗಳು ಯಶಸ್ಸಿನ ಪಥವನ್ನು ತುಳಿಯಬೇಕು ಎಂದು ಕರೆ ನೀಡಿದರು.

ಗುರುಕುಲ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ಮಾತನಾಡಿ, ಹೊಣೆಗಾರಿಕೆಯುತ ಕಲಿಕೆ, ಶಿಸ್ತುಬದ್ಧ ಅಭ್ಯಾಸ ಹಾಗೂ ಏಕಾಗ್ರತೆಯು ವಿದ್ಯಾರ್ಥಿ ಜೀವನದ ಯಶಸ್ಸಿನ ಮೂಲಾಧಾರಗಳಾಗಿದ್ದು, ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂದೀಪ್ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣಕಶಾಸ್ತ್ರ ಉಪನ್ಯಾಸಕ ಶ್ರೀ ರಾಘವೇಂದ್ರ ಅವರು ವಾರ್ಷಿಕ ಯೋಜನೆಯನ್ನು ವಾಚಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಶ್ಮಿಕಾ ಅವರು ವೇದಿಕೆಯ ಗಣ್ಯರನ್ನು ಪರಿಚಯಿಸಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಕು. ಸೌಜನ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಂಜನಿ ಅವರು ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಪವಿತ್ರಾ ಅವರು ವಂದಿಸಿದರು.

ಕಾರ್ಯಗಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವೃಂದದವರು ಭಾಗವಹಿಸಿ ಮಾರ್ಗದರ್ಶನದ ಸದುಪಯೋಗ ಪಡೆದುಕೊಂಡರು.