



ಡೈಲಿವಾರ್ತೆ: 04/ಜೂ./2026


ಬೈಂದೂರು: ಟಿಪ್ಪರ್ ಚಾಲಕನ ಅಜಾಗರೂಕತೆಗೆ ಬೈಕ್ ಸವಾರ ಬಲಿ – ಸ್ಥಳದಲ್ಲೇ ತಲೆಬುರುಡೆ ಒಡೆದು ಸವಾರ ಸಾವು

ಬೈಂದೂರು: ಟಿಪ್ಪರ್ ಲಾರಿಯ ಹಿಂಬದಿಯ ಚಕ್ರ ತಲೆಯ ಮೇಲೆ ಹರಿದ ಪರಿಣಾಮ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಅತ್ಯಂತ ಧೋರಣೀಯವಾಗಿ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ 6:30ರ ವೇಳೆಗೆ ಬೈಂದೂರು ಗ್ರಾಮದ ಗಂಗನಾಡು ಬಳಿಯ ಚಂದ್ರಾವತಿ ಎಂಬುವರ ಅಂಗಡಿಯ ಮುಂಭಾಗದ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಶಿರೂರು ಗ್ರಾಮದ ನಿರ್ಗದ್ದೆಯ ‘ಮಂಜುನಾಥ ನಿಲಯ’ ನಿವಾಸಿ ಮಹಾಬಲ್ ಪೂಜಾರಿ ಎಂದು ಗುರುತಿಸಲಾಗಿದೆ.
ಮೃತ ಮಹಾಬಲ್ ಪೂಜಾರಿಯವರು ತಮ್ಮ ಬೈಕ್ ನಲ್ಲಿ ಗಂಗನಾಡು ಕಡೆಯಿಂದ ಬೈಂದೂರು ಕಡೆಗೆ ಚಲಿಸುತ್ತಿದ್ದರು. ಇದೇ ವೇಳೆ ಅದೇ ದಿಕ್ಕಿನಿಂದ ಬಂದ ಟಿಪ್ಪರ್ ಲಾರಿಯನ್ನು ಅದರ ಚಾಲಕ ರಮೇಶ್ ಎಂಬಾತ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ.
ಮುಂದೆ ಹೋಗುತ್ತಿದ್ದ ಬೈಕ್ ನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಚಾಲಕ ಲಾರಿಯನ್ನು ತಕ್ಷಣವೇ ಎಡಭಾಗಕ್ಕೆ ಚಲಾಯಿಸಿದ್ದು, ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹಾಬಲ್ ಪೂಜಾರಿಯವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಲಾರಿಯ ಹಿಂಬದಿಯ ಚಕ್ರವು ನೇರವಾಗಿ ಅವರ ತಲೆಯ ಮೇಲೆ ಹರಿದಿದ್ದು, ತಲೆಬುರುಡೆ ಒಡೆದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮುಡೂರ ಪೂಜಾರಿ ಅವರು ನೀಡಿದ ದೂರಿನನ್ವಯ ಲಾರಿ ಚಾಲಕ ರಮೇಶ್ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 75/2026, ಕಲಂ: 281, 106 BNS (ಭಾರತೀಯ ನ್ಯಾಯ ಸಂಹಿತೆ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.