ಡೈಲಿವಾರ್ತೆ: 04/ಜೂ./2026

ಕುಂದಾಪುರ: ₹40 ಲಕ್ಷ ಸಾಲದ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಮಹಿಳೆ – ದೂರು ದಾಖಲು

​ಕುಂದಾಪುರ: ಸಾಮಾಜಿಕ ಜಾಲತಾಣಗಳಲ್ಲಿ ಸರಕಾರಿ ಯೋಜನೆಗಳ ಹೆಸರಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರನ್ನು ವಂಚಿಸುವ ಜಾಲವೊಂದು ಸಕ್ರಿಯವಾಗಿದ್ದು, ಕುಂದಾಪುರದ ಮಹಿಳೆಯೊಬ್ಬರು ಬರೋಬ್ಬರಿ 5,69,069 ರೂಪಾಯಿ ಹಣ ಕಳೆದುಕೊಂಡು ವಂಚನೆಗೊಳಗಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

​ಕುಂದಾಪುರ ತಾಲೂಕಿನ ಕಸಬ ಗ್ರಾಮದ ಕೆಳ ಖಾರ್ವಿಕೇರಿಯ ಡೋಗಿ ಪೇರಿ ರಸ್ತೆ ನಿವಾಸಿ ಪ್ರಣೀತ (38) ಗಂಡ ರಾಜ ಖಾರ್ವಿ ಎಂಬುವರೇ ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಮಹಿಳೆ.

​ಘಟನೆಯ ವಿವರ:
ಕಳೆದ ಮಾರ್ಚ್ 10ರಂದು ಪ್ರಣೀತ ಅವರು ತಮ್ಮ ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ, ಅದರಲ್ಲಿ ‘PMGDY’ ಯೋಜನೆಯಡಿ ಸಾಲ ನೀಡುವುದಾಗಿ ಜಾಹೀರಾತೊಂದು ಪ್ರಕಟವಾಗಿತ್ತು. ಅದರಲ್ಲಿ ಸಾಲದ ಅವಶ್ಯಕತೆ ಇರುವವರು 7082732342 ಸಂಖ್ಯೆಗೆ ಕರೆ ಮಾಡುವಂತೆ ನಮೂದಿಸಲಾಗಿತ್ತು. ಇದನ್ನು ನಂಬಿದ ಪ್ರಣೀತ ಅವರು ಸದ್ರಿ ನಂಬರ್‌ಗೆ ಕರೆ ಮಾಡಿದಾಗ, ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ತನ್ನನ್ನು ‘ಶ್ರೀನಿವಾಸ್ ರಾವ್’ ಎಂದು ಪರಿಚಯಿಸಿಕೊಂಡಿದ್ದಾನೆ.
​ಬಳಿಕ ಪ್ರಣೀತ ಅವರಿಗೆ 40 ಲಕ್ಷ ರೂಪಾಯಿ ದೊಡ್ಡ ಮೊತ್ತದ ಸಾಲ ಕೊಡಿಸುವುದಾಗಿ ನಂಬಿಸಿದ ವಂಚಕ, ಸಾಲದ ಪ್ರಕ್ರಿಯೆಗೆ ಮುಂಗಡವಾಗಿ ಹಣ ಪಾವತಿಸಬೇಕೆಂದು ಹೇಳಿದ್ದಾನೆ. ಅವನ ಮಾತನ್ನು ನಿಜವೆಂದು ನಂಬಿದ ಮಹಿಳೆ, ಮಾರ್ಚ್ 11 ರಿಂದ ಏಪ್ರಿಲ್ 13 ರವರೆಗಿನ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 5,69,069 ರೂಪಾಯಿಗಳನ್ನು ಫೋನ್ ಪೇ (PhonePe) ಮೂಲಕ ಆತ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ.


​ಹಣವೂ ಇಲ್ಲ, ಸಾಲವೂ ಇಲ್ಲ:
ಹಣ ವರ್ಗಾವಣೆಯಾದ ಬಳಿಕವೂ ಆರೋಪಿಗಳು ಯಾವುದೇ ಸಾಲದ ಮೊತ್ತವನ್ನು ನೀಡಿರುವುದಿಲ್ಲ. ಇದರಿಂದ ಸಂಶಯಗೊಂಡ ಪ್ರಣೀತ ಅವರು ತಮ್ಮ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದಾಗ, ವಂಚಕನು ಸಾಲ ಬಿಡುಗಡೆಗೆ ಇನ್ನು ಹೆಚ್ಚಿನ ಹಣವನ್ನು ಖಾತೆಗೆ ಹಾಕುವಂತೆ ಪೀಡಿಸಲು ಪ್ರಾರಂಭಿಸಿದ್ದಾನೆ. ತಾವು ವಂಚನೆಗೊಳಗಾಗಿರುವುದನ್ನು ಅರಿತ ಮಹಿಳೆ, ತಕ್ಷಣವೇ ದೂರು ನೀಡಲಾಗದೆ ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಚರ್ಚಿಸಿ ತಡವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಆನ್‌ಲೈನ್ ವಂಚನೆಯ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 49/2026 ರಂತೆ, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ: 318(4) (ವಂಚನೆ) ಮತ್ತು 316(2) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಮ್ ವಿಭಾಗದ ನೆರವಿನೊಂದಿಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.