



ಡೈಲಿವಾರ್ತೆ: 04/ಜೂ./2026


ಧಾರಾಕಾರ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ 8 ವರ್ಷದ ಬಾಲಕ ಸಾವು

ಹುಲಸೂರು (ಬೀದರ್): ಜಿಲ್ಲೆಯಲ್ಲಿ ಸಂಭವಿಸಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ಸಜೀವ ತಂತಿಯನ್ನು ಮುಟ್ಟಿದ ಎಂಟು ವರ್ಷದ ಮುಗ್ಧ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಹುಲಸೂರು ಪಟ್ಟಣದಲ್ಲಿ ಜರುಗಿದೆ.
ಸ್ಥಳೀಯ ನಿವಾಸಿ ಅಲಿ ಮೊಮಿನ್ (8) ಮೃತಪಟ್ಟ ದುರ್ದೈವಿ ಬಾಲಕ. ಜೆಸ್ಕಾಂ (GESCOM) ಅಧಿಕಾರಿಗಳ ಹಾಗೂ ಸಿಬ್ಬಂದಿಯ ಘೋರ ನಿರ್ಲಕ್ಷ್ಯವೇ ಈ ಘಟನೆಗೆ ನೇರ ಕಾರಣ ಎಂದು ಮೃತನ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ:
ಕಳೆದ ಕೆಲವು ದಿನಗಳಿಂದ ಜಿಲ್ಲಾದ್ಯಂತ ವರಣನ ಆರ್ಭಟ ಜೋರಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಮಳೆಯ ತೀವ್ರತೆಗೆ ಹುಲಸೂರು ಪಟ್ಟಣದ ರಸ್ತೆಯಲ್ಲಿದ್ದ ವಿದ್ಯುತ್ ಕಂಬದಿಂದ ಮನೆಗೆ ನೀಡಲಾಗಿದ್ದ ಸರ್ವಿಸ್ ವೈಯರ್ ಕಟ್ ಆಗಿ ನೆಲಕ್ಕೆ ಬಿದ್ದಿತ್ತು. ಆದರೆ, ಈ ಬಗ್ಗೆ ಜೆಸ್ಕಾಂ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ವಹಿಸಿರಲಿಲ್ಲ ಎನ್ನಲಾಗಿದೆ.
ಯಥಾಪ್ರಕಾರ ಮನೆಯ ಹೊರಗೆ ಆಟವಾಡುತ್ತಿದ್ದ ಬಾಲಕ ಅಲಿ ಮೊಮಿನ್, ನೆಲದ ಮೇಲೆ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ಆಕಸ್ಮಿಕವಾಗಿ ಕೈಯಿಂದ ಹಿಡಿದಿದ್ದಾನೆ. ತಂತಿಯಲ್ಲಿ ವಿದ್ಯುತ್ ಸಂಚಾರವಿದ್ದಿದ್ದರಿಂದ ಬಾಲಕನಿಗೆ ತೀವ್ರವಾಗಿ ಕರೆಂಟ್ ಶಾಕ್ ತಗುಲಿದೆ.
ವಿದ್ಯುತ್ ಆಘಾತದಿಂದ ಸ್ಥಳದಲ್ಲೇ ಕುಸಿದು ಬಿದ್ದ ಬಾಲಕನನ್ನು ತಕ್ಷಣವೇ ಸ್ಥಳೀಯರು ಹಾಗೂ ಪೋಷಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಆಟವಾಡುತ್ತಾ ಕಣ್ಣೆದುರೇ ಇದ್ದ ಮಗ ಹೆಣವಾಗಿ ಮಾರ್ಪಟ್ಟಿರುವುದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಳೆ-ಗಾಳಿ ಬಂದಾಗ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆಗಳಿದ್ದರೂ, ಜೆಸ್ಕಾಂ ಇಲಾಖೆಯ ಅಧಿಕಾರಿಗಳು ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಧಿಕಾರಿಗಳ ಈ ಬೇಜವಾಬ್ದಾರಿತನವೇ ಒಂದು ಮುಗ್ಧ ಜೀವ ಬಲಿಯಾಗಲು ಕಾರಣ ಎಂದು ಕುಟುಂಬಸ್ಥರು ಮತ್ತು ಸಾರ್ವಜನಿಕರು ಕಿಡಿಕಾರಿದ್ದಾರೆ. ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.