ಡೈಲಿವಾರ್ತೆ: 04/ಜೂ./2026

ಕುಂದಾಪುರ: ಮೃತರ ಹೆಸರಲ್ಲಿ ನಕಲಿ ಪಾನ್ ಕಾರ್ಡ್ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಲೂಟಿಗೆ ಯತ್ನ – ಆರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲು


​ಕುಂದಾಪುರ: ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆಗಳು ಹಾಗೂ ನಕಲಿ ಪಾನ್ ಕಾರ್ಡ್‌ಗಳನ್ನು ಸೃಷ್ಟಿಸಿ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲೇ ಖೋಟಾ ಸಹಿ ಹಾಕಿ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ವಂಚನೆಯಿಂದ ನೊಂದಣಿ ಮಾಡಿಕೊಂಡಿರುವ ಆಘಾತಕಾರಿ ಹಗರಣವೊಂದು ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪದ ಅಪರಾಧ ಮೊಕದ್ದಮೆ ದಾಖಲಾಗಿದೆ. ಮುಂಬೈನ ದಹಿಸರ್ (ಪಶ್ಚಿಮ) ನಿವಾಸಿ ಸುನೀಲ್ ದೇವ ಪೈ (57) ಎಂಬುವರು ನೀಡಿದ ಅಧಿಕೃತ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


​ಪ್ರಕರಣದ ಹಿನ್ನೆಲೆ:
​ದೂರುದಾರರಾದ ಸುನೀಲ್ ದೇವ ಪೈ ಅವರ ಅಜ್ಜ ಕೃಷ್ಣರಾಯ ಪೈ ಅವರು 1968 ರಲ್ಲಿ ಕುಂದಾಪುರ ಕಸಬಾ ಗ್ರಾಮದ ಸರ್ವೆ ನಂಬರ್ 115-2ಎ, 115/2ಸಿ, 111/13, 111/9ಎ ಮತ್ತು 111/9ಸಿ ವ್ಯಾಪ್ತಿಯ ವಿವಿಧ ಆಸ್ತಿಗಳನ್ನು ಕ್ರಯಪತ್ರದ ಮೂಲಕ ಖರೀದಿಸಿ ಅನುಭವಿಸಿಕೊಂಡು ಬಂದಿದ್ದರು. 1978 ರಲ್ಲಿ ಅಜ್ಜ ಮೃತಪಟ್ಟ ಬಳಿಕ, ಈ ಆಸ್ತಿಗಳು 2015-16 ರ ಮ್ಯುಟೇಶನ್ ಆದೇಶದಂತೆ ಸುನೀಲ್ ಅವರ ತಂದೆಯಾದ ಯು. ದೇವರಾಯ ಪೈ ಹಾಗೂ ಇತರೆ ವಾರಸುದಾರರ ಹೆಸರಿಗೆ ತಲ್ಬೀಲುಗೊಂಡಿದ್ದವು. ತಂದೆ ದೇವರಾಯ ಪೈ ಅವರು 2014 ರ ನವೆಂಬರ್ 10 ರಂದು ಮುಂಬೈನಲ್ಲಿ ನಿಧನರಾಗಿದ್ದರು.


​ಸತ್ತವರ ಹೆಸರಲ್ಲೇ ಜಿಪಿಎ ಸೃಷ್ಟಿಸಿದ ವಂಚಕ ಜಾಲ:


​ದೂರಿನ ಪ್ರಕಾರ, ಪ್ರಕರಣದ 1ನೇ ಆರೋಪಿ ರಾಮಚಂದ್ರ ಕಾಮತ್ ಎಂಬಾತ ಇತರ ಆರೋಪಿಗಳಾದ ಗಣಪ, ರಾಧಾಕೃಷ್ಣ ಸಾರಂಗ, ಸಂಜೀವ, ಲಕ್ಷಣ ಶೆಟ್ಟಿ ಮತ್ತು ನಾಗೇಶ್ ಕಾಮತ್ ಅವರೊಂದಿಗೆ ವ್ಯವಸ್ಥಿತ ಸಂಚು ರೂಪಿಸಿದ್ದಾನೆ. ಆರೋಪಿಗಳು ಸೇರಿ ಫಿರ್ಯಾದಿದಾರರ ಮೃತ ತಂದೆ ದೇವರಾಯ ಪೈ ಅವರ ಹೆಸರಿನಲ್ಲಿ ನಕಲಿ ಪಾನ್ ಕಾರ್ಡ್ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲದೆ, ಸುಮಾರು 25 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ ಪ್ರಖ್ಯಾತ ವಕೀಲರಾದ ಕೆ. ಆನಂದ ಯಾನೆ ಕೆ. ಆನಂದರಾವ್ ಅವರ ಹೆಸರಿನಲ್ಲಿಯೂ ಮತ್ತೊಂದು ನಕಲಿ ಪಾನ್ ಕಾರ್ಡ್ ಸೃಷ್ಟಿಸಿ, ನಕಲಿ ನಂಬರ್‌ಗಳನ್ನು ನಮೂದಿಸಿದ್ದಾರೆ.


​ಉಪನೋಂದಣಾಧಿಕಾರಿ ಕಚೇರಿಯಲ್ಲೇ ನಕಲಿ ದರ್ಬಾರ್:


ಈ ನಕಲಿ ದಾಖಲೆಗಳನ್ನು ಬಳಸಿಕೊಂಡು ಆರೋಪಿಗಳು 2025 ರ ಡಿಸೆಂಬರ್ 5 ರಂದು ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ದಸ್ತಾವೇಜನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮರುದಿನವೇ (ಡಿಸೆಂಬರ್ 6) 6ನೇ ಆರೋಪಿಯು ಈ ವಂಚನೆಯ ದಾಖಲೆಯನ್ನು ಕುಂದಾಪುರ ಉಪನೋಂದಣಾಧಿಕಾರಿಗಳ ಕಚೇರಿಗೆ ನೊಂದಣಿಗೆ ಹಾಜರುಪಡಿಸಿದ್ದಾನೆ. ಮೃತ ದೇವರಾಯ ಪೈ ಅವರ ಸ್ಥಾನದಲ್ಲಿ 1ನೇ ಆರೋಪಿ ರಾಮಚಂದ್ರ ಕಾಮತ್ ಖುದ್ದಾಗಿ ಹಾಜರಾಗಿದ್ದರೆ, ಮೃತ ವಕೀಲ ಆನಂದರಾವ್ ಅವರ ಹೆಸರಿನಲ್ಲಿ ಬೇರೊಬ್ಬ ಅಪರಿಚಿತ ವ್ಯಕ್ತಿಯನ್ನು ನಿಲ್ಲಿಸಿ, ಇಬ್ಬರ ಫೋಟೋ ಹಾಗೂ ಸಹಿಗಳನ್ನು ಫೋರ್ಜರಿ (ನಕಲು) ಮಾಡಲಾಗಿದೆ. ಈ ವಂಚನೆಯ ಜಿಪಿಎ ಪತ್ರಕ್ಕೆ 5ನೇ ಆರೋಪಿ ಲಕ್ಷಣ ಶೆಟ್ಟಿ ಬರಹಗಾರನಾಗಿ ಸಹಿ ಮಾಡಿದ್ದು, ಅಂತಿಮವಾಗಿ 2ನೇ ಆರೋಪಿಯು ದಸ್ತಾವೇಜು ಸಂಖ್ಯೆ 471/2025-26 ರಂತೆ ಈ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಕಾನೂನುಬಾಹಿರವಾಗಿ ನೊಂದಾಯಿಸಿಕೊಂಡಿದ್ದಾನೆ.


​ಭಾರತೀಯ ನ್ಯಾಯ ಸಂಹಿತೆಯಡಿ ಗಂಭೀರ ಪ್ರಕರಣ ದಾಖಲು:


​ತಮ್ಮ ಕುಟುಂಬದ ಆಸ್ತಿಗೆ ಮೃತಪಟ್ಟವರ ಹೆಸರಲ್ಲೇ ನಕಲಿ ಜಿಪಿಎ ಸೃಷ್ಟಿಸಿ ವಂಚಿಸಿರುವುದು ತಡವಾಗಿ ಬೆಳಕಿಗೆ ಬರುತ್ತಿದ್ದಂತೆ ಸುನೀಲ್ ದೇವ ಪೈ ಅವರು ಕುಂದಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
​ಪ್ರಸ್ತುತ ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 50/2026 ರಂತೆ, ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ ನಕಲಿ ದಾಖಲೆ ಸೃಷ್ಟಿ, ವಂಚನೆ ಹಾಗೂ ಫೋರ್ಜರಿ ಪ್ರಕರಣಗಳಿಗೆ ಸಂಬಂಧಿಸಿದ ತೀವ್ರ ಸ್ವರೂಪದ ಕಲಂ: 336(2), 336(3), 340(2) ಜೊತೆಗೆ 3(5) BNS ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ನಡೆದಿರುವ ಈ ಹೈಟೆಕ್ ಭೂ ವಂಚನೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.