



ಡೈಲಿವಾರ್ತೆ: 05/ಜೂ./2026


ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಪೂಜಾರಿ ಬೀಜಾಡಿಯಂತಹ ಸಂಘಟಕನ ನೇತೃತ್ವ ಅನಿವಾರ್ಯ: ಕೋಟ ನಾಗೇಂದ್ರ ಪುತ್ರನ್

ಉಡುಪಿ, ಜೂನ್ 5: ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಬಲಿಷ್ಠಗೊಳಿಸಿ, ಮುಂಬರುವ ಚುನಾವಣೆಗಳಿಗೆ ಸಂಘಟಿತವಾಗಿ ಸಜ್ಜುಗೊಳಿಸಲು ಜನಸಾಮಾನ್ಯರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಾಗೂ ಪಕ್ಷದ ಸಂಘಟನೆಗೆ ಹೊಸ ಚೈತನ್ಯ ತುಂಬಬಲ್ಲ ನಾಯಕತ್ವದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಅಶೋಕ್ ಪೂಜಾರಿ ಬೀಜಾಡಿ ಅವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸುವಂತೆ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಶೋಕ್ ಪೂಜಾರಿ ಅವರು ಹಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಯಾವುದೇ ಅಧಿಕಾರದ ಅಪೇಕ್ಷೆಯಿಲ್ಲದೆ ಜನಸೇವೆಯ ಮೂಲಕ ತಮ್ಮದೇ ಆದ ಸ್ಥಾನಮಾನ ಗಳಿಸಿರುವ ನಾಯಕ ಎಂದು ಹೇಳಿದ್ದಾರೆ.
ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ನಾಯಕ
ಬಡವರು, ಶೋಷಿತರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಸದಾ ಧಾವಿಸುವ ಅಶೋಕ್ ಪೂಜಾರಿ ಅವರು, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಕೊರೋನಾ ಸಂಕಷ್ಟದ ಅವಧಿಯಲ್ಲಿ ಅವರು ಸಲ್ಲಿಸಿದ ಸಮಾಜಮುಖಿ ಸೇವೆ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರ ವಿಶ್ವಾಸಾರ್ಹ ನಾಯಕ:
1986ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಅಶೋಕ್ ಪೂಜಾರಿ ಅವರು ಕೋಣಿ ತಾಲೂಕು ಪಂಚಾಯತ್ ಕ್ಷೇತ್ರದಿಂದ ಆಯ್ಕೆಯಾಗಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರಾಗಿ ಜನಪರ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಮುಂಚೂಣಿಯಲ್ಲಿ ನಿಂತು ದುಡಿಯುವ ಅವರು, ಕಾರ್ಯಕರ್ತರ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುವ ನಾಯಕರೆಂದು ಬಣ್ಣಿಸಿದ್ದಾರೆ.
ಸರಳತೆ, ಸೌಮ್ಯತೆ ಹಾಗೂ ಎಲ್ಲರನ್ನು ಸಮಾನವಾಗಿ ಕಾಣುವ ಗುಣಗಳಿಂದ ಅಶೋಕ್ ಪೂಜಾರಿ ಅವರು ರಾಜಕೀಯ ವಲಯದಲ್ಲಿ ಅಜಾತಶತ್ರು ವ್ಯಕ್ತಿತ್ವ ಹೊಂದಿದ್ದಾರೆ. ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಸರ್ವಮಾನ್ಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಬೀಜಾಡಿ ಮೀನುಗಾರರ ಸಹಕಾರಿ ಸಂಘ ಹಾಗೂ ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘಗಳಲ್ಲಿಯೂ ಅವರು ಯಶಸ್ವಿ ನಾಯಕತ್ವ ನೀಡಿದ್ದು, ಸಹಕಾರಿ ಕ್ಷೇತ್ರದಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಹೈಕಮಾಂಡ್‌ಗೆ ಮನವಿ:
ಯಾವುದೇ ರಾಜಕೀಯ ಗಾಡ್‌ಫಾದರ್‌ಗಳ ಬೆಂಬಲವಿಲ್ಲದೆ, ಕೇವಲ ಜನಸೇವೆ ಮತ್ತು ಪಕ್ಷನಿಷ್ಠೆಯ ಮೂಲಕ ಜನಪ್ರಿಯತೆ ಗಳಿಸಿರುವ ಅಶೋಕ್ ಪೂಜಾರಿ ಬೀಜಾಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಾದ ಸಮಯ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕಗೊಳಿಸುವಂತೆ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ನಾಯಕರು ಹಾಗೂ ನೂತನ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ನಾಗೇಂದ್ರ ಪುತ್ರನ್ ತಿಳಿಸಿದ್ದಾರೆ.