ಡೈಲಿವಾರ್ತೆ: 05/ಜೂ./2026

ಡಿಕೆಶಿ ಸಿಎಂ ಆದ ಎರಡೇ ದಿನಕ್ಕೆ ಬಂಡಾಯದ ಬಿಸಿ: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅಧಿಕೃತ ರಾಜೀನಾಮೆ ಘೋಷಣೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬೆಳವಣಿಗೆಯೊಂದರಲ್ಲಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ದಿನಗಳಲ್ಲಿ ಸರ್ಕಾರಕ್ಕೆ ಮೊದಲ ಬಂಡಾಯದ ಬಿಸಿ ತಟ್ಟಿದೆ. ತಮಗೆ ಹಂಚಿಕೆ ಮಾಡಲಾಗಿರುವ ಜಲಸಂಪನ್ಮೂಲ ಖಾತೆ ಕುರಿತು ತೀವ್ರ ಅಸಮಾಧಾನ ಹೊರಹಾಕಿರುವ ಹಿರಿಯ ನಾಯಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರು ಕೋರಮಂಗಲದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಸಮ್ಮುಖದಲ್ಲೇ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ.


​ಯಾರ ಮನವೊಲಿಕೆಗೂ ಬಗ್ಗದ ರೆಡ್ಡಿ, ನನ್ನ ನಿರ್ಧಾರ ಅಚಲ, ಈ ವಿಷಯದಲ್ಲಿ ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹಠ ಹಿಡಿದಿರುವುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಅಧಿಕಾರಾವಧಿಯ ಆರಂಭದಲ್ಲೇ ಅತಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.


​ಮಾತು ತಪ್ಪಿದ ಡಿಕೆಶಿ: ರೆಡ್ಡಿ ಆಕ್ರೋಶಕ್ಕೆ ಕಾರಣವೇನು?


​ತಾವು ಕೇವಲ ಖಾತೆಗಾಗಿ ರಾಜೀನಾಮೆ ನೀಡುತ್ತಿಲ್ಲ, ಬದಲಿಗೆ ತಮಗೆ ನೀಡಿದ್ದ ಭರವಸೆಯನ್ನು ಹೈಕಮಾಂಡ್ ಹಾಗೂ ಸಿಎಂ ಉಲ್ಲಂಘಿಸಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
​2023ರಲ್ಲಿ ಸಿದ್ದರಾಮಯ್ಯ ಸಂಪುಟ ರಚನೆ ವೇಳೆ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ಹಾಗೂ ಭೈರತಿ ಸುರೇಶ್ ಭರವಸೆ ನೀಡಿದ್ದರು. ಆದರೆ ಆಗ ಸಾರಿಗೆ ಖಾತೆ ನೀಡಲಾಯಿತು. ಆ ಸಂದರ್ಭದಲ್ಲಿ ನಾನು ಬೇಸರಗೊಂಡಾಗ, ಮುಂದೆ ತಾವೇ ಮುಖ್ಯಮಂತ್ರಿಯಾದಾಗ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನೇ ನೀಡುವುದಾಗಿ ಡಿಕೆಶಿ ನನ್ನ ಕೋರಮಂಗಲದ ನಿವಾಸಕ್ಕೆ ಬಂದು ಮಾತು ಕೊಟ್ಟಿದ್ದರು. ಆದರೆ ಈಗ ಮುಖ್ಯಮಂತ್ರಿಯಾದ ಬೆನ್ನಲ್ಲೇ ನನಗೆ ಜಲಸಂಪನ್ಮೂಲ ಖಾತೆ ನೀಡಿದ್ದಾರೆ. ಕೊಟ್ಟ ಮಾತು ತಪ್ಪಿದ ಈ ಕ್ರಮಕ್ಕೆ ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ರೆಡ್ಡಿ ತೀವ್ರ ಬೇಸರ ಹೊರಹಾಕಿದ್ದಾರೆ.


​ಕೋರಮಂಗಲ ಕಚೇರಿಯಲ್ಲಿ ಹೈಡ್ರಾಮಾ: ಯೂತ್ ಕಾಂಗ್ರೆಸ್ ನಾಯಕನಿಗೆ ಗದರಿದ ರೆಡ್ಡಿ


​ಕೋರಮಂಗಲದ ಕಚೇರಿಯಲ್ಲಿ ಮಾಧ್ಯಮಗಳ ಮುಂದೆಯೇ ರಾಜೀನಾಮೆ ಪತ್ರ ಸಿದ್ಧಪಡಿಸುವ ವೇಳೆ ತೀವ್ರ ನಾಟಕೀಯ ಬೆಳವಣಿಗೆಗಳು ಸಂಭವಿಸಿದವು. ಯೂತ್ ಕಾಂಗ್ರೆಸ್ ನಾಯಕ ಮನೋಹರ್ ಅವರು ಮಧ್ಯಪ್ರವೇಶಿಸಿ ಅಧ್ಯಕ್ಷರು (ಡಿಕೆ ಶಿವಕುಮಾರ್) ಮಾತನಾಡುತ್ತಾರೆ, ದಯವಿಟ್ಟು ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವೊಲಿಸಲು ಯತ್ನಿಸಿದಾಗ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶಗೊಂಡರು. ‌
​ಮನೋಹರ್ ನನಗೆ ಕೋಪ ಬರಿಸಬೇಡಿ, ನನ್ನ ನಿರ್ಧಾರ ಮುಗಿದ ಕಥೆ. ನೀವು ಮೊದಲು ಇಲ್ಲಿಂದ ಹೊರಗೆ ಹೋಗಿ, ನಾನು ಮಾಧ್ಯಮಗಳೊಂದಿಗೆ ಮಾತನಾಡಬೇಕು ಎಂದು ರೆಡ್ಡಿ ಗದರಿದ್ದಾರೆ.


​53 ವರ್ಷಗಳ ರಾಜಕೀಯ ನಿಷ್ಠೆ: ಒಂಟಿ ಹೋರಾಟದ ಹಾದಿ
​ತಮ್ಮ ರಾಜಕೀಯ ಹಿನ್ನೆಲೆಯನ್ನು ಸ್ಮರಿಸಿದ ರಾಮಲಿಂಗಾರೆಡ್ಡಿ, ನನ್ನ ಮಗಳು ಅಥವಾ ಕುಟುಂಬದವರ ಬಳಿಯೂ ನಾನು ಈ ಕುರಿತು ಚರ್ಚಿಸಿಲ್ಲ. 1973 ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯಕ್ಕೆ ಬಂದು 53 ವರ್ಷಗಳಿಂದ ಪಕ್ಷದಲ್ಲಿದ್ದೇನೆ. 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನಾಗಿಯೇ ಯಾರ ಬಳಿಗೂ ಹೋಗಿ ರಾಜೀನಾಮೆ ಪತ್ರ ಕೊಡುವುದಿಲ್ಲ, ಇಲ್ಲಿಂದಲೇ ನನ್ನ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ ಎಂದು ಖಡಕ್‌ ಆಗಿ ನುಡಿದರು.
​ಹಿರಿಯ ನಾಯಕರೊಬ್ಬರು ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಬಂಡಾಯವೆದ್ದು ರಾಜೀನಾಮೆ ನೀಡಿರುವುದು ಹೊಸ ಸರ್ಕಾರದ ಸ್ಥಿರತೆ ಮತ್ತು ಸಮನ್ವಯತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಹೈಕಮಾಂಡ್ ಮುಂದಿನ ನಡೆ ಏನು ಎಂಬುದು ತೀವ್ರ ಕುತೂಹಲ ಮೂಡಿಸಿದೆ.