ಡೈಲಿವಾರ್ತೆ: 05/ಜೂ./2026

ಮಾಣಿ ಬಾಲವಿಕಾಸದಲ್ಲಿ ವಿಶ್ವ ಪರಿಸರ ದಿನಾಚರಣೆ – ವನಮಹೋತ್ಸವ ಕಾರ್ಯಕ್ರಮ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು ಹಾಗೂ ಸಾಮಾಜಿಕ ಅರಣ್ಯ ವಲಯ, ಬಂಟ್ವಾಳ ಇದರ ಆಶ್ರಯದಲ್ಲಿ ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜೂನ್ ವನಮಹೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.

“ಪ್ರಕೃತಿಯಿಂದ ಸ್ಪೂರ್ತಿ, ಹವಾಮಾನಕ್ಕಾಗಿ , ನಮ್ಮ ಭವಿಷ್ಯಕ್ಕಾಗಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಎ ವಿ ಯವರು ಶಾಲಾ ವಿದ್ಯಾರ್ಥಿಗಳಿಗೆ ಗಿಡಗಳನ್ನು ಹಸ್ತಾಂತರಿಸಿ, ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಕಾಳಜಿಯ ಅಗತ್ಯತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಬಂಟ್ವಾಳ ವಲಯ ಅರಣ್ಯಾಧಿಕಾರಿ ಸತೀಶ್ ಲೂಕ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಇತಿಹಾಸ ಹಾಗೂ ಮಹತ್ವದ ಬಗ್ಗೆ ವಿವರಿಸಿದರು.

ಬಾಲವಿಕಾಸ ಸಂಸ್ಥೆಯ ಮುಖ್ಯಶಿಕ್ಷಕಿ ಸುಪ್ರಿಯಾ ದೇವರಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಉಪ ಅರಣ್ಯಾಧಿಕಾರಿ ಪ್ರೀತಂ ಎಸ್, ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ಕೃಷ್ಣ ಜೋಗಿ, ಬಾಲವಿಕಾಸ ಸಂಸ್ಥೆಯ ನರ್ಸರಿ ವಿಭಾಗದ ಶೈಕ್ಷಣಿಕ ಸಲಹೆಗಾರ್ತಿ ಫಿಲೋಮಿನಾ ಐಡಾ ಲೋಬೋ, ಸಂಸ್ಥೆಯ ಶಿಕ್ಷಕ – ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ಉಪ ಮುಖ್ಯ ಶಿಕ್ಷಕರಾದ ದಿನಕರ ಪೂಜಾರಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅಶ್ವಿನಿ ವಂದಿಸಿದರು.