



ಡೈಲಿವಾರ್ತೆ: 05/ಜೂ./2026


ಕಾಪು: ಪತ್ನಿ ಮೇಲೆ ನಾದಿನಿಯಿಂದ ಚೂರಿ ಇರಿತ, ಗಂಡನಿಂದ ಅಕ್ರಮ ಬಂಧನ – ಕಾಪು ಠಾಣೆಯಲ್ಲಿ ಗಂಭೀರ ಪ್ರಕರಣ ದಾಖಲು!

ಕಾಪು: ಮದುವೆಯಾದ ದಿನದಿಂದಲೂ ಪತ್ನಿಗೆ ಸಣ್ಣಪುಟ್ಟ ಕಾರಣಗಳಿಗೂ ದೈಹಿಕ-ಮಾನಸಿಕ ಹಿಂಸೆ ನೀಡಿ, ನಾದಿನಿಯೇ ಚೂರಿಯಿಂದ ತಿವಿದು ಗಾಯಗೊಳಿಸಿ, ಗಂಡ ಹಾಗೂ ನಾದಿನಿ ಸೇರಿ ಅಕ್ರಮ ಬಂಧನದಲ್ಲಿಟ್ಟು ಜೀವ ಬೆದರಿಕೆ ಹಾಕಿರುವ ಅತ್ಯಂತ ಗಂಭೀರ ಪ್ರಕರಣವೊಂದು ಕಾಪು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಉಡುಪಿಯ ಉದ್ಯಾವರ ನಿವಾಸಿ ಫಿರ್ದೋಸ್ ಬಾನು (44) ಎಂಬುವರು ನೀಡಿದ ದೂರಿನನ್ವಯ ಅವರ ಪತಿ ಮೊಹಮ್ಮದ್ ಆದಿಲ್ ಮತ್ತು ನಾದಿನಿ ಫೌಜಿಯಾ ಬೇಗಂ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ದೂರುದಾರರಾದ ಫಿರ್ದೋಸ್ ಬಾನು ಅವರಿಗೆ 2000ರ ಜೂನ್ 25 ರಂದು ಉಚ್ಚಿಲ ಬಿರಿಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮೊಹಮ್ಮದ್ ಆದಿಲ್ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಸದ್ಯ 25 ವರ್ಷ ಹಾಗೂ 22 ವರ್ಷ ಪ್ರಾಯದ ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದ ಆರಂಭದಲ್ಲಿ ಪತಿ ವಿದೇಶದಲ್ಲಿ ಎ.ಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ದುಡಿದ ಹಣವನ್ನೆಲ್ಲಾ ತನ್ನ ತಾಯಿಯ ಖಾತೆಗೆ ಹಾಕುತ್ತಿದ್ದನು. ಪತ್ನಿಯ ಖರ್ಚಿಗೆ ಯಾವುದೇ ಹಣ ನೀಡುತ್ತಿರಲಿಲ್ಲ. ಅಲ್ಲದೆ, ಆರಂಭದ ದಿನಗಳಲ್ಲೇ ಅತ್ತೆ ಶಹನಾಝ್ ಬೇಗಂ ಹಾಗೂ ನಾದಿನಿ ಫೌಜಿಯಾ ಬೇಗಂ ಸಣ್ಣ ಕಾರಣಗಳಿಗೂ ಫಿರ್ದೋಸ್ ಬಾನು ಅವರಿಗೆ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದರು ಎನ್ನಲಾಗಿದೆ.
ಅತ್ತೆ ತೀರಿಕೊಂಡ ಬಳಿಕ ಮನೆಯ ಸಂಪೂರ್ಣ ಅಧಿಕಾರ ತೆಗೆದುಕೊಂಡ ನಾದಿನಿ ಫೌಜಿಯಾ ಬೇಗಂ ದೌರ್ಜನ್ಯವನ್ನು ಮತ್ತಷ್ಟು ತೀವ್ರಗೊಳಿಸಿದ್ದಾಳೆ. ಕಳೆದ ಫೆಬ್ರವರಿ 18ರಂದು ಮನೆಯಲ್ಲಿ ಜಗಳ ತೆಗೆದ ನಾದಿನಿ, ಫಿರ್ದೋಸ್ ಬಾನು ಅವರಿಗೆ ಚೂರಿಯಿಂದ ತಿವಿದಿದ್ದಾಳೆ. ಇದರಿಂದಾಗಿ ಅವರ ಎಡಗೈ ಬೆರಳಿಗೆ ತೀವ್ರ ರಕ್ತಗಾಯವಾಗಿದೆ. ಇದಾದ ಬಳಿಕ ಪತಿ ಮತ್ತು ನಾದಿನಿ ಇಬ್ಬರೂ ಸೇರಿ ಗಾಯಾಳು ಮಹಿಳೆಯನ್ನು ಮನೆಯೊಳಗೆ ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದಲ್ಲದೆ, ಮನೆಗೆ ಬೀಗ ಹಾಕಿ ಹೋಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇಷ್ಟಕ್ಕೇ ನಿಲ್ಲದ ಆರೋಪಿಗಳು, ಸಂತ್ರಸ್ತೆಯ ಮೊಬೈಲ್ ಫೋನ್ ಕಸಿದುಕೊಂಡು ಅದprotectionರಲ್ಲಿದ್ದ ಎಲ್ಲಾ ಡೇಟಾವನ್ನು ಸಂಪೂರ್ಣವಾಗಿ ಅಳಿಸಿ ಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಪತ್ನಿಗೆ ತೀವ್ರವಾಗಿ ಥಳಿಸಿ, ಮನೆ ಬಿಟ್ಟು ತೊಲಗಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾರೆ. ಮದುವೆ ಸಮಯದಲ್ಲಿ ಹೆತ್ತವರು ನೀಡಿದ್ದ 40 ಪವನ್ ಚಿನ್ನಾಭರಣಗಳನ್ನು ಪತಿ ಹಾಗೂ ಆತನ ಮನೆಯವರು ದೂರುದಾರರ ಅನುಮತಿಯಿಲ್ಲದೆ ಮಾರಾಟ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ.
ಮದುವೆಯಾದ ದಿನದಿಂದಲೂ ನಿರಂತರವಾಗಿ ಮಾನಸಿಕ, ದೈಹಿಕ ಹಿಂಸೆ ನೀಡಿ, ಚೂರಿಯಿಂದ ಹಲ್ಲೆ ನಡೆಸಿ, ಅಕ್ರಮವಾಗಿ ಬಂಧನದಲ್ಲಿಟ್ಟು ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಆರೋಪಿಗಳಾದ ಪತಿ ಮೊಹಮ್ಮದ್ ಆದಿಲ್ ಹಾಗೂ ನಾದಿನಿ ಪೌಜಿಯಾ ಬೇಗಂ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2026, ಭಾರತೀಯ ನ್ಯಾಯ ಸಂಹಿತೆ (BNS) ಕಲಂ: 85, 115(2), 118(1), 127(2), 351(2) r/w 3(5) ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.