



ಡೈಲಿವಾರ್ತೆ: 05/ಜೂ./2026


ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ಬ್ರಹ್ಮಾವರದಲ್ಲಿ ಬೃಹತ್ ಜನಾಂದೋಲನ: ಜೂ.7 ರಂದು ಸಹಸ್ರಾರು ಜನರ ‘ಜನಜಾಗೃತಿ ನಡಿಗೆ ವಾಕಥಾನ್’ – ಸಂಸದರು, ಜನಪ್ರತಿನಿಧಿಗಳ ಭಾಗಿ

ಕೋಟ, ಜೂ. 6: ಯುವ ಪೀಳಿಗೆಯನ್ನು ತೀವ್ರವಾಗಿ ಕಾಡುತ್ತಿರುವ ಗಾಂಜಾ ಹಾಗೂ ಮಾದಕ ದ್ರವ್ಯ (ಡ್ರಗ್ಸ್) ವ್ಯಸನದ ಪಿಡುಗಿನ ವಿರುದ್ಧ ಮತ್ತು ಮಾದಕ ದ್ರವ್ಯ ಮಾಫಿಯಾವನ್ನು ಬುಡಸಮೇತ ಕಿತ್ತೆಸೆಯುವ ನಿಟ್ಟಿನಲ್ಲಿ ಬ್ರಹ್ಮಾವರದಲ್ಲಿ ಬೃಹತ್ ಜನಜಾಗೃತಿ ನಡಿಗೆ (ವಾಕಥಾನ್) ಆಯೋಜಿಸಲಾಗಿದೆ ಎಂದು ಜನಸೇವಾ ಟ್ರಸ್ಟ್ ಪ್ರಮುಖರಾದ ಶರತ್ ಶೆಟ್ಟಿ ಕೊತ್ತಾಡಿ ತಿಳಿಸಿದ್ದಾರೆ.

ಬ್ರಹ್ಮಾವರದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಜನಸೇವಾ ಟ್ರಸ್ಟ್ ಗಿಳಿಯಾರು ಮತ್ತು ಟೀಮ್ ಅಭಿಮತ ಜಂಟಿ ಆಶ್ರಯದಲ್ಲಿ ಸ್ಥಳೀಯ 50ಕ್ಕೂ ಹೆಚ್ಚು ಪ್ರಮುಖ ಸಾಮಾಜಿಕ ಸಂಘ-ಸಂಸ್ಥೆಗಳ ಸಕ್ರಿಯ ಸಹಕಾರದೊಂದಿಗೆ ಈ ಬೃಹತ್ ಪ್ರತಿಭಟನಾತ್ಮಕ ಹಾಗೂ ಜಾಗೃತಿ ನಡಿಗೆ ಹಮ್ಮಿಕೊಳ್ಳಲಾಗಿದೆ.
ಜೂನ್ 7ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಬ್ರಹ್ಮಾವರದ ಮದರ್ ಪ್ಯಾಲೇಸ್ ಹೋಟೆಲ್ ಮುಂಭಾಗದಿಂದ ಈ ಜಾಗೃತಿ ನಡಿಗೆಯು ಆರಂಭಗೊಳ್ಳಲಿದೆ ಎಂದರು.
ಸಮಾಜಕ್ಕೆ ಮಾರಕವಾಗಿರುವ ಈ ಮಾಫಿಯಾದ ವಿರುದ್ಧ ನಡೆಯಲಿರುವ ಜನಾಂದೋಲನಕ್ಕೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮುಖ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಸೇರಿದಂತೆ ರಾಜಕೀಯ, ಸಾಮಾಜಿಕ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಮಾದಕ ದ್ರವ್ಯ ಜಾಲವು ಗ್ರಾಮೀಣ ಭಾಗಗಳಿಗೂ ವಿಸ್ತರಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಯುವಜನತೆ ಇದರ ದಾಸರಾಗುತ್ತಿದ್ದಾರೆ. ಈ ಗಂಭೀರ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇವಲ ಕಾನೂನು ಮಾತ್ರವಲ್ಲದೆ ಸಾರ್ವಜನಿಕರ ಜಾಗೃತಿಯೂ ಅಷ್ಟೇ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಡೆಯಲಿರುವ ಈ ಬೃಹತ್ ವಾಕಥಾನ್‌ನಲ್ಲಿ ಸಹಸ್ರಾರು ಸಾರ್ವಜನಿಕರು, ಯುವಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಶರತ್ ಶೆಟ್ಟಿ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ಪ್ರಮುಖ ಸಂಘಟನೆಗಳ ಪದಾಧಿಕಾರಿಗಳಾದ ಪ್ರಮೋದ್ ಮಂದಾರ್ತಿ, ಬಾರ್ಕೂರು ಶ್ರೀನಿವಾಸ್ ಶೆಟ್ಟಿ, ರವೀಂದ್ರ ಹೇರೂರು, ಡಿ.ಸಿ. ಉಮೇಶ್ ಶೆಟ್ಟಿ, ಕಾರ್ತೇಶ್, ನಿಖಿಲ್ ನಾಯಕ್, ಸುರೇಶ್ ಕುಮಾರ್ ಬ್ರಹ್ಮಾವರ ಹಾಗೂ ಶ್ರೇಯಸ್ ಶೆಟ್ಟಿ ಕೊಕ್ಕರ್ಣೆ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಕೈಜೋಡಿಸಬೇಕಾಗಿ ವಿನಂತಿಸಿದರು.