ಡೈಲಿವಾರ್ತೆ: 05/ಜೂ./2026

ಬೇಳೂರಿನಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ನೇತೃತ್ವದಲ್ಲಿ ಜನ ಸಂಪರ್ಕ ಸಭೆ ಯಶಸ್ವಿ

ಕುಂದಾಪುರ, ಜೂನ್ 05: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೇಳೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಶುಕ್ರವಾರ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ನೇತೃತ್ವದಲ್ಲಿ ಜನ ಸಂಪರ್ಕ ಸಭೆ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್, ಬೇಳೂರು ಗ್ರಾ.ಪಂ ಪಿಡಿಒ ಪ್ರಶಾಂತ್, ಆಡಳಿತಾಧಿಕಾರಿ ರಾಘವೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಗ್ರಾಮಸ್ಥರು ರಸ್ತೆ, ಕುಡಿಯುವ ನೀರು, ವಸತಿ ಯೋಜನೆ, ಕಂದಾಯ, ಮೆಸ್ಕಾಂ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಿದರು. ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ವಿಳಂಬವಿಲ್ಲದೆ ತಲುಪುವಂತೆ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.