



ಡೈಲಿವಾರ್ತೆ: 07/ಜೂ./2026


ರಾಷ್ಟ್ರ ಪ್ರಶಸ್ತಿ ವಿಜೇತ, ಮಲಯಾಳಂ ಚಿತ್ರರಂಗದ ನಗುವಿನ ಸಾಮ್ರಾಟ್ ಸಲೀಂ ಕುಮಾರ್ ಇನ್ನಿಲ್ಲ

ತಿರುವನಂತಪುರಂ, ಜೂ. 7: ಮಲಯಾಳಂ ಚಿತ್ರರಂಗದ ಹಿರಿಯ ನಟ, ಹಾಸ್ಯ ಕಲಾವಿದ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಲೀಂ ಕುಮಾರ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 56 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಸಲೀಂ ಕುಮಾರ್ ಅವರು ದೀರ್ಘಕಾಲದಿಂದ ಲಿವರ್ ಸಿರೋಸಿಸ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರದೆ ಕೊನೆಗೆ ನಿಧನರಾಗಿದ್ದಾರೆ.
ಮೃತರು ಪತ್ನಿ ಸುನಿತಾ ಹಾಗೂ ಪುತ್ರರಾದ ಚಂದು ಮತ್ತು ಆರೋಮಲ್ ಅವರನ್ನು ಅಗಲಿದ್ದಾರೆ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
1969ರ ಅಕ್ಟೋಬರ್ 10ರಂದು ಕೇರಳದ ನಾರ್ತ್ ಪರವೂರ್‌ನಲ್ಲಿ ಜನಿಸಿದ ಸಲೀಂ ಕುಮಾರ್, ಎರ್ನಾಕುಲಂನ ಮಹಾರಾಜಾಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸಿದ್ದರು. ಮಿಮಿಕ್ರಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು, ಬಳಿಕ ಮಲಯಾಳಂ ಚಿತ್ರರಂಗ ಪ್ರವೇಶಿಸಿ ವಿಶಿಷ್ಟ ಹಾಸ್ಯ ನಟರಾಗಿ ಅಪಾರ ಜನಪ್ರಿಯತೆ ಗಳಿಸಿದರು.
ಹಾಸ್ಯ ಪಾತ್ರಗಳ ಮೂಲಕ ಮನೆಮಾತಾಗಿದ್ದ ಸಲೀಂ ಕುಮಾರ್, ನಂತರ ಗಂಭೀರ ಹಾಗೂ ಭಾವನಾತ್ಮಕ ಪಾತ್ರಗಳಲ್ಲಿಯೂ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದರು. 2010ರಲ್ಲಿ ಬಿಡುಗಡೆಯಾದ ‘ಅದಾಮಿಂಟೆ ಮಕನ್ ಅಬು’ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕಾಗಿ ಅವರು ಅತ್ಯುತ್ತಮ ನಟ ವಿಭಾಗದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದರು. ‘ಅಚಾನುರಂಗತಾ ವೀಡು’ ಚಿತ್ರದ ಅಭಿನಯಕ್ಕಾಗಿ ಕೇರಳ ರಾಜ್ಯದ ಎರಡನೇ ಅತ್ಯುತ್ತಮ ನಟ ಪ್ರಶಸ್ತಿಗೂ ಭಾಜನರಾಗಿದ್ದರು.
ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದ ಅವರು, 2017ರಲ್ಲಿ ನಿರ್ದೇಶಿಸಿದ ‘ಕರುತ ಜೂಥನ್’ ಚಿತ್ರಕ್ಕೆ ಅತ್ಯುತ್ತಮ ಕಥೆ ವಿಭಾಗದಲ್ಲಿ ಕೇರಳ ರಾಜ್ಯ ಪ್ರಶಸ್ತಿ ಲಭಿಸಿತ್ತು.
ಸುಮಾರು ಮೂರು ದಶಕಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಲೀಂ ಕುಮಾರ್ ಅವರ ನಿಧನದಿಂದ ಕೇರಳದ ಸಾಂಸ್ಕೃತಿಕ ಮತ್ತು ಕಲಾ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ.