




ಡೈಲಿವಾರ್ತೆ:27/ಅ./2026

ಮಣಿಪಾಲದಲ್ಲಿ ಮಾರಕ ಆಯುಧಗಳೊಂದಿಗೆ ವ್ಯಕ್ತಿ ಬಂಧನ: ಗ್ಯಾಂಗ್ ವೈಷಮ್ಯಕ್ಕೆ ಪ್ರತೀಕಾರದ ಸಂಚು?

ಉಡುಪಿ: ಮಣಿಪಾಲದ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಮಾರಕ ಆಯುಧಗಳನ್ನು ಹೊಂದಿಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿಯ ಕಿನ್ನಿಮೂಲ್ಕಿಯ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್ (26) ಎಂದು ಗುರುತಿಸಲಾಗಿದೆ.
ಅ. 24ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಶಂಭುಲಿಂಗಯ್ಯ ಎಂ.ಇ. ಅವರು ಗಸ್ತು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ, ವ್ಯಕ್ತಿಯೊಬ್ಬ ಮಾರಕ ಆಯುಧಗಳೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು.
ಈ ವೇಳೆ ಆತನ ಬಳಿ ಸುಮಾರು 20 ಇಂಚು ಉದ್ದದ ನೀಲಿ ಹಿಡಿಕೆಯ ಕಬ್ಬಿಣದ ಲಾಂಗ್ ಹಾಗೂ 16 ಇಂಚು ಉದ್ದದ ಹಸಿರು ಹಿಡಿಕೆಯ ಕಬ್ಬಿಣದ ಚಾಕು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಂಗ್ ವೈಷಮ್ಯಕ್ಕೆ ಪ್ರತೀಕಾರದ ಉದ್ದೇಶ?
ಪೊಲೀಸರ ವಿಚಾರಣೆ ವೇಳೆ ದಾವೂದ್, ಇಸಾಕ್ ಹಾಗೂ ಗರುಡ ಗ್ಯಾಂಗ್ನ ಕೆಲವರೊಂದಿಗೆ ವೈಮನಸ್ಸು ಹೊಂದಿರುವುದಾಗಿ ಆರೋಪಿ ತಿಳಿಸಿದ್ದಾನೆ ಎನ್ನಲಾಗಿದೆ. ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಮಾರಕ ಆಯುಧಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದಾಗಿ ಆತ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಲ್ಲದೆ, ಆರೋಪಿಯ ವಿರುದ್ಧ ಈ ಹಿಂದೆ ಉಡುಪಿ ನಗರ, ಶಿರ್ವ, ಸೆನ್ ಹಾಗೂ ಮಂಗಳೂರಿನ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಮತಿಯಿಲ್ಲದೆ ಸೂಕ್ತ ಕಾರಣವಿಲ್ಲದೆ ಮಾರಕ ಆಯುಧಗಳನ್ನು ಹೊಂದಿದ್ದ ಆರೋಪದ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026ರಂತೆ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 4 ಮತ್ತು 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.