




ಡೈಲಿವಾರ್ತೆ:27/ಅ./2026

ಮಂಗಳೂರು ಉತ್ತರದಲ್ಲಿ ಪಂಚಾಯತ್ ಚುನಾವಣೆಗೆ SDPI ಸಿದ್ಧತೆ: 2 ಜಿಲ್ಲಾ ಪಂಚಾಯತ್, 10 ತಾಲೂಕು ಪಂಚಾಯತ್ ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧಾರ

ಗುರುಪುರ ಕೈಕಂಬ, ಅ. 27: ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಕ್ಷೇತ್ರ ವ್ಯಾಪ್ತಿಯ 2 ಜಿಲ್ಲಾ ಪಂಚಾಯತ್ ಹಾಗೂ 10 ತಾಲೂಕು ಪಂಚಾಯತ್ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಈ ಸಂಬಂಧ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಚುನಾವಣಾ ಪೂರ್ವಭಾವಿ ಸಭೆಯು ಕ್ಷೇತ್ರಾಧ್ಯಕ್ಷ ಉಸ್ಮಾನ್ ಗುರುಪುರ ಅವರ ಅಧ್ಯಕ್ಷತೆಯಲ್ಲಿ ಗುರುಪುರ ಕೈಕಂಬದ ಮಾತಾಕೃಪ ಹಾಲ್ನಲ್ಲಿ ನಡೆಯಿತು. ಸಭೆಯಲ್ಲಿ ಚುನಾವಣಾ ಸಿದ್ಧತೆ, ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣಾ ಕಾರ್ಯತಂತ್ರಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಪಕ್ಷದ ಸಂಘಟನೆಯನ್ನು ವಿಸ್ತರಿಸುವುದು ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಚುನಾವಣೆಯನ್ನು ಎದುರಿಸಲು ಸಭೆ ನಿರ್ಧರಿಸಿತು. ಇದರ ಭಾಗವಾಗಿ 2 ಜಿಲ್ಲಾ ಪಂಚಾಯತ್ ಮತ್ತು 10 ತಾಲೂಕು ಪಂಚಾಯತ್ ಸ್ಥಾನಗಳಲ್ಲಿ ಸ್ಪರ್ಧಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಕ್ಷೇತ್ರಾಧ್ಯಕ್ಷ ಉಸ್ಮಾನ್ ಗುರುಪುರ, ಹಲವು ವರ್ಷಗಳಿಂದ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷಗಳು ಗ್ರಾಮೀಣ ಪ್ರದೇಶಗಳ ಮೂಲಭೂತ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವಲ್ಲಿ ವಿಫಲವಾಗಿವೆ ಎಂದು ಟೀಕಿಸಿದರು. ಗ್ರಾಮೀಣ ಭಾಗದ ರಸ್ತೆ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಭ್ರಷ್ಟಾಚಾರ ಮುಕ್ತ, ಜಾತ್ಯತೀತ ಹಾಗೂ ಜನಪರ ಆಡಳಿತ ನೀಡುವುದು SDPIಯ ಪ್ರಮುಖ ಗುರಿಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಗೆ ಅವರ ಹಕ್ಕುಗಳ ರಕ್ಷಣೆಗೆ ನಿರಂತರವಾಗಿ ಹೋರಾಡುವುದು ಪಕ್ಷದ ಬದ್ಧತೆಯಾಗಿದೆ ಎಂದು ಅವರು ಹೇಳಿದರು.
ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಪಕ್ಷ ಗಮನಾರ್ಹ ಫಲಿತಾಂಶ ದಾಖಲಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಕಾರ್ಯಕರ್ತರು ಈಗಿನಿಂದಲೇ ಮನೆಮನೆಗೆ ತೆರಳಿ ಜನರನ್ನು ಸಂಪರ್ಕಿಸಬೇಕು. ಪಕ್ಷದ ಧ್ಯೇಯೋದ್ದೇಶಗಳು ಹಾಗೂ ಜನಪರ ಕಾರ್ಯಚಟುವಟಿಕೆಗಳನ್ನು ಜನರಿಗೆ ತಲುಪಿಸುವ ಮೂಲಕ ಚುನಾವಣಾ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಸಂಘಟನೆಯನ್ನು ಬಲಪಡಿಸುವುದು, ಪಂಚಾಯತ್ ವ್ಯಾಪ್ತಿಯಲ್ಲಿ ಪಕ್ಷದ ಚಟುವಟಿಕೆಗಳನ್ನು ವಿಸ್ತರಿಸುವುದು, ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಹಾಗೂ ಚುನಾವಣಾ ಪ್ರಚಾರದ ರೂಪುರೇಷೆಗಳನ್ನು ಸಿದ್ಧಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ SDPI ಮಂಗಳೂರು ನಗರ ಜಿಲ್ಲಾಧ್ಯಕ್ಷ ಅಶ್ರಫ್ ಅಡ್ಡೂರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಗುರುಪುರ ಮತ್ತು ಅಡ್ಯಾರ್ ಬ್ಲಾಕ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು, ಪಂಚಾಯತ್ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.