



ಡೈಲಿವಾರ್ತೆ: 08/ಜೂ./2026


ಕೋಟ: ಹಪ್ಪಳದ ಮೆಷಿನ್‌ಗೆ ಸಿಲುಕಿ ಫ್ಯಾಕ್ಟರಿ ಉದ್ಯೋಗಿಯ ಬೆರಳು ಕಟ್ – ಮಾಲೀಕನ ವಿರುದ್ಧ ಎಫ್.ಐ.ಆರ್ ದಾಖಲು

ಕೋಟ: ತರಬೇತಿ ನೀಡದೆ, ಯಾವುದೇ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಯಂತ್ರದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸಿದ ಮಾಲೀಕನ ಬೇಜವಾಬ್ದಾರಿತನದಿಂದಾಗಿ, ಪ್ಯಾಕ್ಟರಿ ಉದ್ಯೋಗಿಯೊಬ್ಬರು ತನ್ನ ಬಲಗೈ ಬೆರಳನ್ನು ಕಳೆದುಕೊಂಡು ಅಂಗವೈಕಲ್ಯಕ್ಕೆ ಒಳಗಾದ ಗಂಭೀರ ಘಟನೆ ಯಡಾಡಿ ಮತ್ಯಾಡಿ ಗ್ರಾಮದಲ್ಲಿ ಸಂಭವಿಸಿದೆ.
ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ನಿವಾಸಿ ರಶ್ಮಿ (32) ಎಂಬುವರು ನೀಡಿದ ದೂರಿನನ್ವಯ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ:
ಬಾಧಿತ ಮಹಿಳೆ ರಶ್ಮಿ ಅವರು ಕಳೆದ ಒಂದು ವರ್ಷದಿಂದ ಯಡಾಡಿ ಮತ್ಯಾಡಿ ಗ್ರಾಮದ ‘ಸಚಿ ಫುಡ್ ಪ್ರಾಡಕ್ಟ್ಸ್’ ಫ್ಯಾಕ್ಟರಿಯಲ್ಲಿ ನರ್ಸರಿ ಮತ್ತು ಬಿಲ್ಲಿಂಗ್ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದರು. ದಿನಾಂಕ 06/04/2026 ರಂದು ಬೆಳಿಗ್ಗೆ 09:30 ಗಂಟೆಯ ಸುಮಾರಿಗೆ ಫ್ಯಾಕ್ಟರಿ ಮಾಲೀಕರಾದ ಸಂಜೀವ ಕುಲಾಲ್ ಅವರು, ರಶ್ಮಿ ಅವರಿಗೆ ಹಪ್ಪಳ ತಯಾರಿಸುವ ಯಂತ್ರದಲ್ಲಿ ಕೆಲಸ ನಿರ್ವಹಿಸುವಂತೆ ಸೂಚಿಸಿದ್ದಾರೆ.
ತನಗೆ ಹಪ್ಪಳದ ಮೆಷಿನ್‌ನಲ್ಲಿ ಕೆಲಸ ಮಾಡಿದ ಯಾವುದೇ ಅನುಭವವಾಗಲಿ, ತರಬೇತಿಯಾಗಲಿ ಇಲ್ಲವೆಂದು ರಶ್ಮಿ ಅವರು ಮಾಲೀಕರಿಗೆ ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಕೆಲಸಕ್ಕೆ ಬಂದವರು ಹೇಳಿದ ಕೆಲಸ ಮಾಡಬೇಕು ಎಂದು ಮಾಲೀಕರು ಒತ್ತಾಯಪೂರ್ವಕವಾಗಿ ಅವರನ್ನು ಯಂತ್ರದ ಕೆಲಸಕ್ಕೆ ನಿಯೋಜಿಸಿದ್ದಾರೆ ಎನ್ನಲಾಗಿದೆ.
ಮಾಲೀಕರ ಒತ್ತಾಯಕ್ಕೆ ಮಣಿದು ರಶ್ಮಿ ಅವರು ಹಪ್ಪಳದ ಯಂತ್ರವನ್ನು ಆನ್ ಮಾಡಿ ಹಿಟ್ಟು ಹಾಕುತ್ತಿದ್ದಾಗ, ದುರಾದೃಷ್ಟವಶಾತ್ ಅವರ ಬಲಗೈ ಯಂತ್ರದ ಒಳಗೆ ಸಿಲುಕಿಕೊಂಡಿದೆ. ತೀವ್ರವಾಗಿ ಜಖಂಗೊಂಡ ಅವರ ಬಲಗೈಯನ್ನು ಯಂತ್ರದಿಂದ ಹೊರತೆಗೆದು, ತಕ್ಷಣವೇ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ರಶ್ಮಿ ಅವರ ಬಲಗೈ ತೋರು ಬೆರಳನ್ನು ತೆಗೆಯಬೇಕಾಗಿ ಬಂದಿದೆ. ಮಾಲೀಕನ ಹಠ ಹಾಗೂ ನಿರ್ಲಕ್ಷ್ಯದ ಧೋರಣೆಯೇ ಮಹಿಳೆಯ ಅಂಗವೈಕಲ್ಯಕ್ಕೆ ನೇರ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಯಂತ್ರೋಪಕರಣಗಳನ್ನು ಬಳಸುವಾಗ ಉದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡದೆ ಮತ್ತು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ವಹಿಸದೆ, ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪಿ ಮಾಲೀಕ ಸಂಜೀವ ಕುಲಾಲ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 96/2026, ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಯ ಕಲಂ 289 ಮತ್ತು 125 (b) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೊಂಡಿದ್ದಾರೆ.