



ಡೈಲಿವಾರ್ತೆ: 08/ಜೂ./2026


ಕುಂದಾಪುರ: ಮೊದಲ ವರ್ಷದಲ್ಲೇ ಇತಿಹಾಸ ಸೃಷ್ಟಿಸಿದ ಸುಜ್ಞಾನ ಶಿಕ್ಷಣ ಸಂಸ್ಥೆ – ಕೆ.ಸಿ.ಇ.ಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅದ್ಭುತ ಸಾಧನೆ

ಕುಂದಾಪುರ, ಜೂನ್ 8: ರಾಜ್ಯಮಟ್ಟದಲ್ಲಿ ಇತ್ತೀಚೆಗೆ ಪ್ರಕಟಗೊಂಡ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶದಲ್ಲಿ ಕುಂದಾಪುರದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆ ಹಾಗೂ ಕುಂದಾಪುರ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.
ಏಪ್ರಿಲ್ 23 ಮತ್ತು 24ರಂದು ನಡೆದ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ಆಯೋಜಿಸಲಾದ ಕೆಸಿಇಟಿ ಪರೀಕ್ಷೆಯಲ್ಲಿ ಸುಜ್ಞಾನ ಪಿಯು ಕಾಲೇಜು ಹಾಗೂ ಸುಜ್ಞಾನ ನೀಟ್ ಅಕಾಡೆಮಿಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಗಮನಾರ್ಹ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳಾದ ಧನುಷ್ ದೇವಾಡಿಗ (ಎನ್‌ಎಲ್‌ಟಿ) ರಾಜ್ಯದಲ್ಲಿ 391ನೇ ರ‍್ಯಾಂಕ್ ಪಡೆದು ಸಂಸ್ಥೆಯ ಸಾಧನೆಗೆ ಮುನ್ನುಡಿ ಬರೆದಿದ್ದಾರೆ. ಇಂಚರಾ 616ನೇ, ಸಮ್ಮೆದ ಪಾರೀಸ್ 888ನೇ, ಪ್ರಿಯಾಂಕ ಶೆಟ್ಟಿ 2680ನೇ, ಸೃಷ್ಟಿ ಶಿವಾಜಿ 3345ನೇ, ಸಿಂಚನಾ 4731ನೇ, ರಜತ್ ಅಡಿಗ 5389ನೇ, ಕೌಶಿಕ್ ಶೆಟ್ಟಿ 6093ನೇ ಹಾಗೂ ಜಯರಾಜ್ ಜೆ.ಎಸ್. 6166ನೇ ರ‍್ಯಾಂಕ್ ಗಳಿಸಿ ಹತ್ತು ಸಾವಿರದೊಳಗಿನ ಸ್ಥಾನಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.
ಸುಜ್ಞಾನ ಪಿಯು ಕಾಲೇಜು ತನ್ನ ಶೈಕ್ಷಣಿಕ ಪಯಣದ ಮೊದಲ ವರ್ಷದಲ್ಲೇ ಗಮನಾರ್ಹ ಸಾಧನೆ ದಾಖಲಿಸಿದ್ದು, ಇತ್ತೀಚೆಗೆ ಪ್ರಕಟವಾದ 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ.100ರಷ್ಟು ಉತ್ತೀರ್ಣತೆ ದಾಖಲಿಸಿ ರಾಜ್ಯಮಟ್ಟದಲ್ಲಿ ಎರಡು ರ‍್ಯಾಂಕ್‌ಗಳನ್ನು ಗಳಿಸಿತ್ತು.
ಕಾಲೇಜಿನ ಮೊದಲ ಬ್ಯಾಚ್‌ನ 125 ವಿದ್ಯಾರ್ಥಿಗಳ ಪೈಕಿ 91 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ಇದೀಗ ಕೆಸಿಇಟಿ ಫಲಿತಾಂಶದಲ್ಲಿಯೂ ಅಗ್ರ ಸಾಧನೆ ದಾಖಲಿಸುವ ಮೂಲಕ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ಸುಜ್ಞಾನ ಪಿಯು ಕಾಲೇಜು ಹಾಗೂ ಸುಜ್ಞಾನ ನೀಟ್ ಅಕಾಡೆಮಿ ವಿದ್ಯಾರ್ಥಿಗಳಿಗೆ ದೇಶದ ವಿವಿಧ ಭಾಗಗಳ ಪರಿಣಿತ ತರಬೇತುದಾರರ ಮೂಲಕ ಗುಣಮಟ್ಟದ ತರಬೇತಿ ನೀಡಿ, CET, NEET ಹಾಗೂ JEE ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಥವಾಗಿ ಸಜ್ಜುಗೊಳಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಶೆಟ್ಟಿ ಹಾಗೂ ಖಜಾಂಚಿ ಭರತ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದಲ್ಲಿ ಅತ್ಯುತ್ತಮ ರ‍್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ಅವರ ಮುಂದಿನ ಉನ್ನತ ಶಿಕ್ಷಣದ ಪಯಣಕ್ಕೆ ಶುಭ ಹಾರೈಸಿದ್ದಾರೆ.