ಡೈಲಿವಾರ್ತೆ: 08/ಜೂ./2026

ಸರ್ಕಾರಿ ಉದ್ಯೋಗದ ಆಮಿಷ: ₹5.3 ಕೋಟಿ ವಂಚನೆ ಆರೋಪ – ತಂದೆ-ಮಗಳು ಸಿಸಿಬಿ ಬಲೆಗೆ

ಬೆಂಗಳೂರು, ಜೂನ್ 8: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದ ಆರೋಪದಡಿ ತಂದೆ-ಮಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಎಂಬಿಎ ಪದವೀಧರೆಯಾದ ಶಂಶಾದ್ ಬೇಗಂ ಹಾಗೂ ಆಕೆಯ ತಂದೆ ಎಂ.ಎ. ಮನ್ಸೂರ್ ಅಹ್ಮದ್ ಎಂದು ಗುರುತಿಸಲಾಗಿದೆ. ಆರೋಪಿಗಳು ನಿರುದ್ಯೋಗಿ ಹಾಗೂ ವಿದ್ಯಾವಂತ ಯುವಕರನ್ನು ಗುರಿಯಾಗಿಸಿಕೊಂಡು, ಸರ್ಕಾರಿ ಇಲಾಖೆಗಳಲ್ಲಿನ ಉದ್ಯೋಗಗಳನ್ನು ತಮ್ಮ ಪ್ರಭಾವದ ಮೂಲಕ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಹಣ ಸಂಗ್ರಹಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಸಿಸಿಬಿ ಪೊಲೀಸರ ಪ್ರಕಾರ, ಆರೋಪಿಗಳು ರೈಲ್ವೆ, ಆದಾಯ ತೆರಿಗೆ, ನೀರಾವರಿ, ಆರೋಗ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳ ನೇಮಕಾತಿ ಹೆಸರಿನಲ್ಲಿ ಉತ್ತರ ಕರ್ನಾಟಕದ 40ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ಸುಮಾರು ₹5.3 ಕೋಟಿ ಹಣ ಪಡೆದು ವಂಚನೆ ನಡೆಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ತಮ್ಮನ್ನು ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿರುವವರಂತೆ ಬಿಂಬಿಸಿಕೊಂಡು ವಿಶ್ವಾಸ ಗಳಿಸುತ್ತಿದ್ದರು. ಅಲ್ಲದೆ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ತರಬೇತಿ ಶುಲ್ಕದ ಹೆಸರಿನಲ್ಲಿ ಹಣ ಸಂಗ್ರಹಿಸುತ್ತಿದ್ದರು. ಕೆಲವರಿಗೆ ಅನುಮಾನ ಬಾರದಂತೆ ನಾಲ್ಕು ತಿಂಗಳ ಸಂಬಳವನ್ನೂ ಪಾವತಿಸಿ ನಂಬಿಕೆ ಮೂಡಿಸಿದ್ದರೆಂದು ಆರೋಪಿಸಲಾಗಿದೆ.
ಇದಲ್ಲದೆ, ಉದ್ಯೋಗ ಸಿಕ್ಕಿರುವಂತೆ ತೋರಿಸಲು ನಕಲಿ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿತ್ತು. ಪ್ರತಿಯೊಬ್ಬ ಅಭ್ಯರ್ಥಿಯಿಂದ ₹5 ಲಕ್ಷದಿಂದ ₹10 ಲಕ್ಷದವರೆಗೆ ಹಣ ವಸೂಲಿ ಮಾಡಿರುವ ಆರೋಪ ಕೇಳಿಬಂದಿದೆ.
ವಿಜಯಪುರ ಮೂಲದ ಒಬ್ಬ ವ್ಯಕ್ತಿಯಿಂದಲೇ ₹2.5 ಕೋಟಿಗೂ ಅಧಿಕ ಮೊತ್ತ ವಂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಸಂಗಮೇಶ್ ರಾಚಯ್ಯ ವಸ್ತ್ರದ್ ಅವರು 2025ರ ನವೆಂಬರ್ 17ರಂದು ಸಿಸಿಬಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು 2023ರಿಂದ 2025ರ ಅವಧಿಯ ಹಣಕಾಸು ವ್ಯವಹಾರಗಳನ್ನು ಪರಿಶೀಲಿಸಿ, ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ.
ತನಿಖೆ ಪೂರ್ಣಗೊಂಡ ಬಳಿಕ ಜೂನ್ 4ರಂದು ಇಬ್ಬರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಈ ವಂಚನೆ ಜಾಲದಲ್ಲಿ ಇತರ ಕುಟುಂಬ ಸದಸ್ಯರು ಹಾಗೂ ಸಹಚರರ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.