ಡೈಲಿವಾರ್ತೆ: 08/ಜೂ./2026

ಕೆ.ಸಿ.ಇ.ಟಿ. ಫಲಿತಾಂಶ: ಕುಂದಾಪುರ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಅದ್ಬುತ ಸಾಧನೆ

ಕುಂದಾಪುರ: ರಾಜ್ಯಮಟ್ಟದಲ್ಲಿ ಪ್ರಕಟಗೊಂಡ ಕೆಸಿಇಟಿ (KCET) ಫಲಿತಾಂಶದಲ್ಲಿ ಕುಂದಾಪುರದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ದಾಖಲಿಸುವ ಮೂಲಕ ಸಂಸ್ಥೆಗೆ, ಪೋಷಕರಿಗೆ ಹಾಗೂ ಇಡೀ ಕುಂದಾಪುರ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಕೆಸಿಇಟಿ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅನುಪ ಶೇಖರ್ ನಾಯಕ್ 284ನೇ ರ‍್ಯಾಂಕ್, ಮಾನ್ಯ 519ನೇ ರ‍್ಯಾಂಕ್, ಮಾನಿಂಗ್ ಶ್ರೀಕಾಂತ್ 540ನೇ ರ‍್ಯಾಂಕ್, ಗಜೇಂದ್ರ ಕೆ.ಕೆ. 1098ನೇ ರ‍್ಯಾಂಕ್, ಬಾಲಗೌಡ 1287ನೇ ರ‍್ಯಾಂಕ್, ಜೆ.ಎನ್. ಜ್ಞಾನಪುತ್ರನ್ 1498ನೇ ರ‍್ಯಾಂಕ್, ಬಸನಗೌಡ ಪಾಟೀಲ್ 1652ನೇ ರ‍್ಯಾಂಕ್ ಹಾಗೂ ಶ್ರೀಶ ಶೆಟ್ಟಿ 1950ನೇ ರ‍್ಯಾಂಕ್ ಪಡೆದು ಗಮನಾರ್ಹ ಸಾಧನೆ ಮೆರೆದಿದ್ದಾರೆ.

ಇದಲ್ಲದೆ, ಸಂಸ್ಥೆಯ 16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 5 ಸಾವಿರದೊಳಗಿನ ರ‍್ಯಾಂಕ್
ಹಾಗೂ 58 ವಿದ್ಯಾರ್ಥಿಗಳು 10 ಸಾವಿರದೊಳಗಿನ ರ‍್ಯಾಂಕ್ ಗಳಿಸಿ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿಯೂ ಸಂಸ್ಥೆಯ ವಿದ್ಯಾರ್ಥಿ ಜೆ.ಎನ್. ಜ್ಞಾನಪುತ್ರನ್ 8162ನೇ ಅಖಿಲ ಭಾರತೀಯ ರ‍್ಯಾಂಕ್ ಪಡೆದು ಕುಂದಾಪುರ ತಾಲೂಕಿನ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಯೂ ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೂರನೇ ಸ್ಥಾನ ಸೇರಿದಂತೆ ಒಟ್ಟು 12 ರ‍್ಯಾಂಕ್ ಗಳನ್ನು ಪಡೆದು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸಿಕೊಂಡಿರುವ ಎಕ್ಸಲೆಂಟ್ ಸಂಸ್ಥೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ನಿರಂತರವಾಗಿ ಶ್ರಮಿಸುತ್ತಿರುವುದು ಈ ಸಾಧನೆಗಳಿಂದ ಮತ್ತೊಮ್ಮೆ ಸಾಬೀತಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ, ದೀಪಾ ಎಂ. ಹೆಗ್ಡೆ, ಪ್ರಾಂಶುಪಾಲ ನಾಗರಾಜ್ ಶೆಟ್ಟಿ, ಉಪನ್ಯಾಸಕಿ ಸರೋಜಿನಿ ಪಿ. ಆಚಾರ್ಯ, ಸಿಬಿಎಸ್‌ಇ ಸಂಯೋಜಕಿ ವಿಶಾಲ ಶೆಟ್ಟಿ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಮತ್ತಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.