



ಡೈಲಿವಾರ್ತೆ: 09/ಜೂ./2026


ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ಜಾಲ ಖಾಸಗೀಕರಣಕ್ಕೆ ಯತ್ನ: ಕೋಟದಲ್ಲಿ ನೌಕರರು ಹಾಗೂ ಸಾರ್ವಜನಿಕರಿಂದ ತೀವ್ರ ಪ್ರತಿಭಟನೆ, ಉಗ್ರ ಹೋರಾಟದ ಎಚ್ಚರಿಕೆ!

ಕೋಟ: ಮೆಸ್ಕಾಂ ವ್ಯಾಪ್ತಿಯ ಉಡುಪಿ, ಮಂಗಳೂರು ಹಾಗೂ ಶಿವಮೊಗ್ಗ ವಲಯಗಳಲ್ಲಿನ ಹಲವು ವಿದ್ಯುತ್ ಜಾಲಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಾದ ಟಾಟಾ ಪವರ್ ಕಂಪನಿ ಪ್ರೈವೇಟ್ ಲಿಮಿಟೆಡ್‌ಗೆ ವಹಿಸುವ ಸಂಬಂಧ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಕೆಯಾಗಿರುವ ಅರ್ಜಿಯ ಹಿನ್ನೆಲೆಯಲ್ಲಿ ಖಾಸಗೀಕರಣದ ಆತಂಕ ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ವಿರೋಧಿಸಿ ಕುಂದಾಪುರ ವಿಭಾಗದ ಕೋಟ ಉಪವಿಭಾಗದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕೋಟ ಶಾಖಾ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ 50ಕ್ಕೂ ಹೆಚ್ಚು ನೌಕರರು, ಗುತ್ತಿಗೆದಾರರು ಹಾಗೂ ಗ್ರಾಹಕರು ಭಾಗವಹಿಸಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ವಿಠಲವಾಡಿ ಹಾಗೂ ಕಾರ್ಯದರ್ಶಿ ಸುಕುಮಾರ ಶೆಟ್ಟಿ, ಸಾರ್ವಜನಿಕ ಸೇವೆಯಾಗಿ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸುವುದರಿಂದ ಉಂಟಾಗಬಹುದಾದ ನಷ್ಟಗಳು ಮತ್ತು ಸಮಸ್ಯೆಗಳ ಕುರಿತು ವಿವರಿಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ನೌಕರರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಹೋರಾಟಕ್ಕೆ ಸಜ್ಜಾಗುವಂತೆ ಅವರು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೋಟ ಸಹಾಯಕ ಇಂಜಿನಿಯರ್ ಪ್ರಶಾಂತ ಶೆಟ್ಟಿ, ಶಿರಿಯಾರ ಶಾಖಾಧಿಕಾರಿ ವೈಭವ ಶೆಟ್ಟಿ ಹಾಗೂ ಸಾಸ್ತಾನ ಶಾಖಾಧಿಕಾರಿ ಮಹೇಶ್ ಕೆ. ಮಾತನಾಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಜಾರಿಯಾದಲ್ಲಿ ನೌಕರರು ಹಾಗೂ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಖಾಸಗೀಕರಣ ಪ್ರಕ್ರಿಯೆ ಮುಂದುವರಿದರೆ ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದರು.
ಕಾರ್ಯಕ್ರಮವನ್ನು ಮೇಲ್ವಿಚಾರಕ ಚಂದ್ರಶೇಖರ ಕೋಟ ನಿರೂಪಿಸಿದರು. ಶಿರಿಯಾರ ಮೇಲ್ವಿಚಾರಕ ಉಮೇಶ್, ನೌಕರರ ಸಂಘದ ಸದಸ್ಯರು, ಗುತ್ತಿಗೆದಾರರು ಹಾಗೂ ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.