ಡೈಲಿವಾರ್ತೆ: 09/ಜೂ./2026

ಬ್ರಹ್ಮಾವರ: ಅನ್ನಭಾಗ್ಯ ಪಡಿತರ ಅಕ್ಕಿ ಅಕ್ರಮ ಸಾಗಾಟ ಪತ್ತೆ – 13 ಕ್ವಿಂಟಲ್‌ಗೂ ಅಧಿಕ ಅಕ್ಕಿ ವಶಕ್ಕೆ, ಓರ್ವನ ವಿರುದ್ಧ ಪ್ರಕರಣ ದಾಖಲು

ಬ್ರಹ್ಮಾವರ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದು ಬ್ರಹ್ಮಾವರದಲ್ಲಿ ಬೆಳಕಿಗೆ ಬಂದಿದ್ದು, 13 ಕ್ವಿಂಟಲ್‌ಗೂ ಅಧಿಕ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಹಾರ ನಿರೀಕ್ಷಕರಾದ ವಸಂತ ಕುಮಾರ್ ಅವರಿಗೆ ಜೂನ್ 8ರಂದು ರಾತ್ರಿ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಮಾಹಿತಿ ನೀಡಿದ್ದು, ವಾರಂಬಳ್ಳಿ ಗ್ರಾಮದ ಆಕಾಶವಾಣಿ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಅಕ್ಕಿ ಸಾಗಾಟ ಮಾಡಲಾಗುತ್ತಿರುವುದು ಪತ್ತೆಯಾಗಿತ್ತು.

ಮಾಹಿತಿಯ ಮೇರೆಗೆ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳು KA-20-AA-9700 ಸಂಖ್ಯೆಯ ಗೂಡ್ಸ್ ರಿಕ್ಷಾವನ್ನು ಪರಿಶೀಲಿಸಿದಾಗ, ವಾಹನದ ಹಿಂಭಾಗದಲ್ಲಿ 39 ಚೀಲಗಳಲ್ಲಿ ಒಟ್ಟು 13 ಕ್ವಿಂಟಲ್ 92 ಕೆ.ಜಿ 300 ಗ್ರಾಂ ಅಕ್ಕಿ ಸಂಗ್ರಹಿಸಲಾಗಿರುವುದು ಕಂಡುಬಂದಿದೆ. ಪರಿಶೀಲನೆಯ ವೇಳೆ ಈ ಅಕ್ಕಿಯು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುವ ಪಡಿತರ ಅಕ್ಕಿ ಎಂಬುದು ದೃಢಪಟ್ಟಿದೆ.

ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 47,300 ರೂ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಕಿಯ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಪರವಾನಿಗೆಗಳ ಬಗ್ಗೆ ವಾಹನ ಚಾಲಕ ಜೀಪನ್ @ ಯಾಸಿನ್ ಅವರನ್ನು ವಿಚಾರಿಸಿದಾಗ, ಯಾವುದೇ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಕಿ ತುಂಬಿದ್ದ 39 ಚೀಲಗಳು, ಗೂಡ್ಸ್ ರಿಕ್ಷಾ ಹಾಗೂ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 111/2026 ದಾಖಲಿಸಲಾಗಿದ್ದು, ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ (ನಿಯಂತ್ರಣ) ಆದೇಶ-2016ರ ಸಂಬಂಧಿತ ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.