ಡೈಲಿವಾರ್ತೆ: 03/ಜು./2026

ಸಿಎ ಫೌಂಡೇಶನ್ ಪರೀಕ್ಷೆ: ಕುಂದಾಪುರ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳ ಅದ್ಭುತ ಸಾಧನೆ

ಕುಂದಾಪುರ: ಇಲ್ಲಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ರಾಷ್ಟ್ರಮಟ್ಟದ ಪ್ರತಿಷ್ಠಿತ ಸಂಸ್ಥೆಗಳಾದ ‘ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ (ICAI) ಮತ್ತು ‘ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ’ (ICSI) ನಡೆಸಿದ ಸಿಎ ಫೌಂಡೇಶನ್ ಪರೀಕ್ಷೆಗಳಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

​ಕಳೆದ 14 ವರ್ಷಗಳಿಂದ ಸಿಎ ಹಾಗೂ ಸಿಎಸ್‌ಇಇಟಿ (CSEET) ನಂತಹ ವೃತ್ತಿಪರ ಕೋರ್ಸ್‌ಗಳಿಗೆ ಯಶಸ್ವಿಯಾಗಿ ಅತ್ಯುತ್ತಮ ತರಬೇತಿ ನೀಡುತ್ತಾ ಬಂದಿರುವ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿಯರಾದ ಸಾನ್ವಿ ಶೆಟ್ಟಿ ಹಾಗೂ ತನ್ವಿ ಶೆಟ್ಟಿ ಈ ಉನ್ನತ ಸಾಧನೆಗೈದಿದ್ದಾರೆ.

ಪರೀಕ್ಷೆಯಲ್ಲಿ ಸಾನ್ವಿ ಶೆಟ್ಟಿ 305 ಅಂಕಗಳನ್ನು ಹಾಗೂ ತನ್ವಿ ಶೆಟ್ಟಿ 268 ಅಂಕಗಳನ್ನು ಪಡೆಯುವುದರೊಂದಿಗೆ ಅತ್ಯುತ್ತಮ ಗುಣ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಈ ಮೂಲಕ ಇಬ್ಬರೂ ವಿದ್ಯಾರ್ಥಿನಿಯರು ಸಿಎ ಕೋರ್ಸ್‌ನ ಮುಂದಿನ ಉನ್ನತ ಹಂತದ ವ್ಯಾಸಂಗಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ಕಠಿಣ ಪರಿಶ್ರಮದ ಮೂಲಕ ಕಾಲೇಜು ಹಾಗೂ ಹೆತ್ತವರಿಗೆ ಹೆಮ್ಮೆ ತಂದಿರುವ ವಿದ್ಯಾರ್ಥಿಗಳ ಈ ಮಹತ್ತರ ಸಾಧನೆಯನ್ನು ಎಂ. ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ, ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದದವರು ಮುಕ್ತಕಂಠದಿಂದ ಶ್ಲಾಘಿಸಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.