


ಡೈಲಿವಾರ್ತೆ: 03/ಜು./2026


ಸರ್ಜಾಪುರ ಸಮೀಪ ಭೀಕರ ದುರಂತ: ಬೈಕ್ ಸಮೇತ ಸುಟ್ಟು ಕರಕಲಾದ ಯುವಕನ ಶವ ಪತ್ತೆ, ಕೊಲೆ ಶಂಕೆ!

ಆನೇಕಲ್: ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಯುವಕನೊಬ್ಬ ತನ್ನ ಬೈಕ್ ಸಮೇತ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇಡೀ ಭಾಗದಲ್ಲಿ ತೀವ್ರ ಆತಂಕ ಹಾಗೂ ಸಂಚಲನ ಮೂಡಿಸಿದೆ.
ಮೃತನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ ವಂಶಿಕೃಷ್ಣ (26) ಎಂದು ಗುರುತಿಸಲಾಗಿದ್ದು, ಘಟನೆಯ ಹಿಂದೆ ವ್ಯವಸ್ಥಿತ ಕೊಲೆಯ ಸಂಚು ಇರುವ ಶಂಕೆ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ
ಮೃತ ವಂಶಿಕೃಷ್ಣ ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯೊಂದರಲ್ಲಿ ವಾಸವಾಗಿದ್ದನು. ಎನ್‌ಟಿಟಿಎಫ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಮುಗಿಸಿ, ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಈತ, ಕಳೆದ ನಾಲ್ಕೈದು ವರ್ಷಗಳಿಂದ ನಿರುದ್ಯೋಗಿಯಾಗಿದ್ದ ಎನ್ನಲಾಗಿದೆ.
ಘಟನೆ ನಡೆದ ದಿನ ಮಧ್ಯಾಹ್ನ ಸುಮಾರು 3:40ಕ್ಕೆ ವಂಶಿಕೃಷ್ಣ ತನ್ನ ಪಿಜಿಯಿಂದ ಬೈಕ್‌ನಲ್ಲಿ ಹೊರಟಿದ್ದನು. ಆಂಧ್ರಪ್ರದೇಶದಿಂದ ಬರುತ್ತಿದ್ದ ತನ್ನ ಸ್ನೇಹಿತ ಭಾನು ಪ್ರಕಾಶ್‌ನನ್ನು ಕರೆತರಲು ಆತ ಸರ್ಜಾಪುರಕ್ಕೆ ತೆರಳುತ್ತಿದ್ದನು. ಮಾರ್ಗಮಧ್ಯೆ ಮತ್ತೊಬ್ಬ ಸ್ನೇಹಿತ ಪ್ರವೀಣ್‌ಗೆ ಕರೆ ಮಾಡಿ, ರಾತ್ರಿ ಊಟಕ್ಕೆ ಬರುವುದಾಗಿಯೂ ತಿಳಿಸಿದ್ದನು. ಆದರೆ, ಸಂಜೆ 4:40ರ ಸುಮಾರಿಗೆ ಭಾನು ಪ್ರಕಾಶ್ ಕರೆ ಮಾಡಿದಾಗ ವಂಶಿಕೃಷ್ಣನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದಾಗಿ ಕೆಲವೇ ನಿಮಿಷಗಳಲ್ಲಿ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸರ್ಜಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ, ಬೈಕ್ ಹಾಗೂ ಯುವಕನ ದೇಹ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವುದು ಬೆಳಕಿಗೆ ಬಂದಿದೆ. ಬೈಕ್‌ನ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಪೊಲೀಸರು ಮೃತನ ಸಹೋದರ ಶಿವಕೃಷ್ಣನನ್ನು ಸಂಪರ್ಕಿಸಿದ್ದಾರೆ. ತದನಂತರ ಸ್ಥಳಕ್ಕೆ ಬಂದ ಕುಟುಂಬಸ್ಥರು ಹಾಗೂ ಸ್ನೇಹಿತರು ಮೃತದೇಹವನ್ನು ಗುರುತಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯ ಸಂಗ್ರಹಕ್ಕಾಗಿ ಸ್ಥಳಕ್ಕೆ ‘ಸೋಕೋ’ (SOCO) ತಾಂತ್ರಿಕ ತಂಡ ಹಾಗೂ ಶ್ವಾನದಳವನ್ನು ಕರೆಯಿಸಿ ಪ್ರಮುಖ ಸುಳಿವುಗಳನ್ನು ಕಲೆಹಾಕಲಾಗಿದೆ.
ಇದೊಂದು ಪಕ್ಕಾ ಯೋಜಿತ ಕೊಲೆ ಎಂದು ಮೃತನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ವಂಶಿಕೃಷ್ಣನಿಗೆ ಯಾರೊಂದಿಗೂ ದ್ವೇಷವಿರಲಿಲ್ಲ, ಯಾವುದೇ ಪ್ರೇಮ ಸಂಬಂಧವೂ ಇರಲಿಲ್ಲ. ಆತ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಸಿನವನಲ್ಲ. ಆತನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಬೈಕ್ ಸಮೇತ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬಸ್ಥರು ಕಣ್ಣೀರಿಡುತ್ತಾ ಆಗ್ರಹಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಪೊಲೀಸರು:
ಪ್ರಸ್ತುತ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಮಹೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ತನಿಖೆ ಆರಂಭಿಸಿದೆ. ವಂಶಿಕೃಷ್ಣ ಕೊನೆಯದಾಗಿ ಮಾತನಾಡಿದ ಮೊಬೈಲ್ ಕರೆಗಳ ವಿವರ (CDR), ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.