ಡೈಲಿವಾರ್ತೆ: 03/ಜು./2026

ಗೋವಾ ರೆಸಾರ್ಟ್‌ನಲ್ಲಿ ಮಲ್ಪೆ ವ್ಯಕ್ತಿ ಕೊಲೆ ಪ್ರಕರಣ: ಮಂಗಳೂರು ಮೂಲದ ಯುವತಿ ಬಂಧನ!

​ಪಣಜಿ (ಗೋವಾ): ಗೋವಾದ ಪ್ರಸಿದ್ಧ ಪ್ರವಾಸಿ ತಾಣವಾದ ಕಳಂಗೂಟ್‌ನ ಅತಿಥಿ ಗೃಹವೊಂದರಲ್ಲಿ (ಗೆಸ್ಟ್‌ ಹೌಸ್) ನಡೆದಿದ್ದ ಸಂದೀಪ್ ಸಾಲ್ಯಾನ್ ಎಂಬುವವರ ನಿಗೂಢ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳಂಗೂಟ್ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ಮೂಲತಃ ಮಂಗಳೂರಿನವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಅಕ್ಷತಾ ಬಂಧಿತ ಮಹಿಳಾ ಆರೋಪಿಯಾಗಿದ್ದಾರೆ.
ಪೊಲೀಸರು ಈಕೆಯನ್ನು ಈ ಕೊಲೆ ಪ್ರಕರಣದ ಮುಖ್ಯ ಆರೋಪಿ ಎಂದು ಗುರುತಿಸಿದ್ದಾರೆ.

​ಪ್ರಕರಣದ ಹಿನ್ನೆಲೆ:
​ಕೊಲೆಯಾದ ಸಂದೀಪ್ ಸಾಲ್ಯಾನ್ ಉಡುಪಿ ಜಿಲ್ಲೆಯ ಮಲ್ಪೆಯ ನಿವಾಸಿಯಾಗಿದ್ದರು. ಘಟನೆ ನಡೆಯುವುದಕ್ಕೆ ಕೆಲವೇ ದಿನಗಳ ಮುನ್ನವಷ್ಟೇ ಅವರು ಗೋವಾಕ್ಕೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಕಳಂಗೂಟ್‌ನಲ್ಲಿರುವ ಅತಿಥಿ ಗೃಹವೊಂದರಲ್ಲಿ ಸಂದೀಪ್ ಅವರು ಶಂಕಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಕೊಲೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
​ಸದ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷತಾಳನ್ನು ಬಂಧಿಸಿರುವ ಕಳಂಗೂಟ್ ಪೊಲೀಸರು, ಕೊಲೆಗೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.