




ಡೈಲಿವಾರ್ತೆ: 05/ಜು./2026

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಹೊನ್ನಾವರದ ಮಂಕಿ ಠಾಣೆ ಪಿಎಸ್‌ಐ ಬಂಧನ

ಭಟ್ಕಳ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಅಭಿನಂದನ ಎಸ್. ಅವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಕಾನೂನು ರಕ್ಷಕನೇ ಭಕ್ಷಕನಾದ ಈ ಘಟನೆ ಇಡೀ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ.
ಬಂಧಿತ ಆರೋಪಿ ಅಭಿನಂದನ ಮೂಲತಃ ಬೆಂಗಳೂರು ದಕ್ಷಿಣ ಜಿಲ್ಲೆಯವರಾಗಿದ್ದು, ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮಂಕಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ನಿಯೋಜನೆಗೊಂಡಿದ್ದರು.
ಪ್ರಸ್ತುತ ಭಟ್ಕಳ ನಗರ ವ್ಯಾಪ್ತಿಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ ಇವರನ್ನು ನಿಯೋಜಿಸಲಾಗಿತ್ತು ಎನ್ನಲಾಗಿದೆ.
ಘಟನೆಯ ಹಿನ್ನೆಲೆ:
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಎಸ್‌ಐ ಅಭಿನಂದನ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರ ಅಪ್ರಾಪ್ತ ಬಾಲಕಿಯನ್ನು ಭಟ್ಕಳಕ್ಕೆ ಕರೆಯಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಸಂತ್ರಸ್ತೆ ಬಾಲಕಿಯ ಕಡೆಯಿಂದ ಭಟ್ಕಳ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಕೆಯಾಗಿತ್ತು.
ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು
ದೂರಿನ ಗಂಭೀರತೆಯನ್ನು ಪರಿಗಣಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಅಧಿಕಾರಿ ವಿರುದ್ಧ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶನಿವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು, ಸದ್ಯ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಕರ್ತವ್ಯದ ಮೇಲಿದ್ದ ಉನ್ನತ ಅಧಿಕಾರಿಯೇ ಇಂತಹ ಹೀನ ಕೃತ್ಯದಲ್ಲಿ ಭಾಗಿಯಾಗಿ ಬಂಧನಕ್ಕೊಳಗಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.