ಡೈಲಿವಾರ್ತೆ: 05/ಜು./2026

ಕೋಟ ಶಿವಾನಂದ ಮರಳಿ ಸಾಲಿಗ್ರಾಮ ‘ಯಕ್ಷರಂಗ ದಂಗಳಕ್ಕೆ’: ಕೋಟ ಶಿವಾನಂದರು ಚೆಂಡೆ ಕಲೆಯ ಆಧುನಿಕ ಏಕಲವ್ಯ: ತಾರಾನಾಥ್ ಹೊಳ್ಳ ಶ್ಲಾಘನೆ

​ಕೋಟ: ಯಕ್ಷಗಾನ ರಂಗದಲ್ಲಿ ಯಾವುದೇ ಪ್ರತ್ಯಕ್ಷ ಗುರು ಇಲ್ಲದಿದ್ದರೂ, ಹಿರಿಯರ ವಾದನವನ್ನು ದೂರದಿಂದಲೇ ನೋಡುತ್ತಾ ಸ್ವಪ್ರಯತ್ನದಿಂದ ಚೆಂಡೆ ಕಲಿತ ಆಧುನಿಕ ಏಲಕವ್ಯ ನಮ್ಮ ಕೋಟ ಶಿವಾನಂದರು ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಹಿರಿಯ ಸದಸ್ಯ ಶ್ರೀ ತಾರಾನಾಥ್ ಹೊಳ್ಳ ಕೊಂಡಾಡಿದರು.

ಅವರು ​ಸಾಲಿಗ್ರಾಮದಲ್ಲಿ ಜರುಗಿದ ಹಿರಿಯ ಚೆಂಡೆ ವಾದಕ ಕೋಟ ಶಿವಾನಂದ ಅವರ ಗೌರವಾರ್ಪಣೆ ಹಾಗೂ ಪುನರಾಗಮನದ ಕೋಟ ಶಿವಾನಂದ ‘ಮರಳಿ ಸಾಲಿಗ್ರಾಮದ ಯಕ್ಷ ರಂಗ ದಂಗಳಕ್ಕೆ’ ಸಾಂಸ್ಕೃತಿಕ ರಂಗ ಸಂಜೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಕೋಟ ಹಿರೇಮಹಾಲಿಂಗೇಶ್ವರದ ಹಂಗಾರಕಟ್ಟೆ ಕಲಾ ಕೇಂದ್ರದಲ್ಲಿ ತರಗತಿ ನಡೆಯುವಾಗ ಶಿವಾನಂದರು ದೂರದಲ್ಲೇ ಕುಳಿತು, ಕೋಲಿನಿಂದ ಡಬ್ಬಿ ಬಾರಿಸಿ ಸ್ವಯಂ ಕಲಿತ ಸಾಧಕರು. ಯಕ್ಷಗಾನ ರಂಗದಲ್ಲಿ ಒಟ್ಟು 46 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಇವರು, ಕೊನೆಯ 39 ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲೇ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪ್ರತಿಷ್ಠಿತ ‘ಕಾಳಿಂಗ ನಾವಡ ಪ್ರಶಸ್ತಿ’ ಸೇರಿದಂತೆ ಹತ್ತು ಹಲವು ಗೌರವಗಳು ಸಂದಿವೆ. ಇದೀಗ ಅವರು ಸಂಪೂರ್ಣ ಗುಣಮುಖರಾಗಿ ಮರಳಿ ಸಾಲಿಗ್ರಾಮ ಮೇಳಕ್ಕೆ ಬರುತ್ತಿರುವುದು ಸಂತೋಷದ ವಿಷಯ ಎಂದು ಹೊಳ್ಳ ಹಾರೈಸಿದರು.

​ಮಗು ಮನಸ್ಸಿನ ಅಹಂಕಾರವಿಲ್ಲದ ಹಿರಿಯ ಕಲಾವಿದ: ನಟಿ ಪ್ರತಿಮಾ ನಾಯಕ್

ಅಭಿನಂದನಾ ನುಡಿಗಳನ್ನಾಡಿದ ‘ಕಾಂತಾರ’ ಚಿತ್ರದ ಖ್ಯಾತ ನಟಿ ಶ್ರೀಮತಿ ಪ್ರತಿಮಾ ನಾಯಕ್ ಅವರು, “ಶಿವಣ್ಣ ಅವರು ಕಲಾ ಜಗತ್ತಿನ ಹಿರಿಯ ಸಾಧಕರಾಗಿದ್ದರೂ, ಚೂರೂ ಅಹಂಕಾರವಿಲ್ಲದ ಮಗುವಿನಂತಹ ನಿಷ್ಕಲ್ಮಶ ಮನಸ್ಸಿನ ಅಪರೂಪದ ವ್ಯಕ್ತಿ. ‘ಕಾಂತಾರ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಣ್ಣನ ಸರಳ ವ್ಯಕ್ತಿತ್ವ ನನಗೆ ಹತ್ತಿರದಿಂದ ಪರಿಚಯವಾಯಿತು. ಹಿರಿಯ ಸಾಧಕನೆಂಬ ಯಾವುದೇ ಹಮ್ಮು-ಬಿಮ್ಮಿಲ್ಲದೆ ಸೆಟ್‌ನಲ್ಲಿ ಎಲ್ಲರೊಂದಿಗೆ ಸರಿಸಮಾನವಾಗಿ ಬೆರೆಯುತ್ತಿದ್ದ ಅವರ ಗುಣ ಮರೆಯಲಾಗದ್ದು. ಶಿವಣ್ಣನ ಅಪ್ರತಿಮ ಕಲೆಯ ಮುಂದೆ ನಾನೊಬ್ಬ ಕುರುಡಿಯಷ್ಟೇ ಎಂದು ವಿನಮ್ರತೆಯಿಂದ ನುಡಿದರು.

​ಪ್ರಚಾರದ ಹುಚ್ಚಿಲ್ಲದ ಕಲಾ ಯೋಗಿ: ರಮೇಶ್ ಮೆಂಡನ್

ಕಾರ್ಯಕ್ರಮದ ಸಂಯೋಜಕ, ಸಾಲಿಗ್ರಾಮದ ಪ್ರಮುಖ ಸಂಘಟಕ ಶ್ರೀ ರಮೇಶ್ ಮೆಂಡನ್ ಪ್ರಾಸ್ತವಿಕವಾಗಿ ಮಾತನಾಡಿ ಇಂದಿನ ದಿನಗಳಲ್ಲಿ ಪ್ರಚಾರಕ್ಕಾಗಿ ಹಪಾಹಪಿಸುವವರ ಮಧ್ಯೆ, ಯಾವುದೇ ಹಮ್ಮು-ಬಿಮ್ಮಿಲ್ಲದೆ ಬದುಕುತ್ತಿರುವ ಅಪರೂಪದ ಕಲಾ ಯೋಗಿ ಕೋಟ ಶಿವಾನಂದರು. ಅವರ ಸರಳತೆ ಮತ್ತು ಕಲೆಯ ಮೇಲಿನ ಬದ್ಧತೆಯನ್ನು ನೋಡಿ, ಸಾಲಿಗ್ರಾಮ ಮೇಳದ ಯಜಮಾನರು ಅವರನ್ನು ಮತ್ತೆ ಮೇಳಕ್ಕೆ ಸೇರಿಸಿಕೊಂಡಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಗೌರವ ಸಲ್ಲಿಸುವ ಉದ್ದೇಶದಿಂದಲೇ ಅಭಿಮಾನಿಗಳೆಲ್ಲರೂ ಸೇರಿ ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

​ಸಮಾರಂಭದ ಘನ ಅಧ್ಯಕ್ಷತೆಯನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾನ್ವಿತ ಉಪಾಧ್ಯಕ್ಷರಾದ ಶ್ರೀ ಚಂದ್ರಶೇಖರ್ ಉಪಾಧ್ಯಾಯ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕೋಟ ಶಿವಾನಂದ ಅವರನ್ನು ಗಣ್ಯರ ಸಮ್ಮುಖದಲ್ಲಿ ಅತ್ಯಂತ ಭವ್ಯವಾಗಿ ಸನ್ಮಾನಿಸಲಾಯಿತು.

​ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೋಟ ಸಿ.ಎ. ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ, ಕೋಟದ ‘ಪಂಚವರ್ಣ ಯುವಕ ಮಂಡಲ’ದ ಸಂಸ್ಥಾಪಕಾಧ್ಯಕ್ಷ ಶೇವಾದಿ ಸುರೇಶ್ ಗಾಣಿಗ, ಪ್ರಗತಿಪರ ಕೃಷಿಕರು ಹಾಗೂ ಕಲಾ ಪೋಷಕರಾದ ರವೀಂದ್ರ ಐತಾಳ್ ಉಪಸ್ಥಿತರಿದ್ದು ಶುಭ ಹಾರೈಸಿದರು.

​ ಶಶಿದರ ಮಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಕಡ ಸೀತಾರಾಮ್ ಸೊಮಯಾಜಿ ಧನ್ಯವಾದ ಸಮರ್ಪಿಸಿದರು.

ಸಭಾ ಕಾರ್ಯಕ್ರಮದ ನಂತರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಭವ್ಯ ‘ದಕ್ಷಯಜ್ಞ’ ಯಕ್ಷಗಾನ ಪ್ರದರ್ಶನ ಜರುಗಿತು.