ಡೈಲಿವಾರ್ತೆ: 11/ಜು./2026

ಡಿವೈಡರ್‌ಗೆ ಕಾರು ಡಿಕ್ಕಿ: ತಾಯಿ ಹಾಗೂ ಇಬ್ಬರು ಪುತ್ರರರು ಸೇರಿ ಮೂವರು ದುರ್ಮರಣ!

ವಿಜಯಪುರ, ಜುಲೈ 11: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ.

ಮೃತರನ್ನು ತಾಯಿ ಸತ್ಯವೇಣಿ(38), ಪುತ್ರರಾದ ಹರಿವೆಂಕಟರಾಮ್(20) ಮತ್ತು ಜಶ್ವಂತ(18) ಎಂದು ಗುರುತಿಸಲಾಗಿದೆ.
ತಂದೆ ರಾಘವೇಂದ್ರ(41)ಗೆ ಗಂಭೀರ ಗಾಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ:
ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಒಂದೇ ಕುಟುಂಬದ ನಾಲ್ವರು ಶಿರಡಿಗೆ ಹೊರಟಿದ್ದರು. 20 ವರ್ಷದ ಮಗ ಹರಿವೆಂಕಟರಾಮ್​​ ಕಾರು ಚಲಾಯಿಸುತ್ತಿದ್ದು.
ಈ ವೇಳೆ ಡಿವೈಡರ್​ಗೆ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ನಿದ್ದೆ ಮಂಪರಿನಲ್ಲಿ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಮನಗೂಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.