ಡೈಲಿವಾರ್ತೆ: 11/ಜು./2026

ಕಾಲೇಜು ವಿದ್ಯಾರ್ಥಿನಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ಆರೋಪ – ಖಾಸಗಿ ಬಸ್ಸಿನ ಕಂಡಕ್ಟರ್‌ನ ಬಂಧನ

ಮಂಗಳೂರು: ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಬಸ್‌ನ ಕಂಡಕ್ಟರ್‌ನನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ಮೂಲದ ಕರ್ವೇಲು ನಿವಾಸಿ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಆರೋಪಿ ಇರ್ಫಾನ್ ಮಂಗಳೂರು – ವಿಟ್ಲ ಮಾರ್ಗದ ಸೆಲೇನ ಖಾಸಗಿ ಬಸ್‌ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ.

ಘಟನೆ ವಿವರ:
ಜುಲೈ 9 ರಂದು ಸಂಜೆ ವೇಳೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ಆರೋಪಿ ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿನಿಯನ್ನು ಹಿಂದಿನ ಸೀಟಿಗೆ ಬಾ ಎಂದು ಕರೆದು ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜುಲೈ 10ರಂದು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.