ಡೈಲಿವಾರ್ತೆ: 11/ಜು./2026

ಉಪ್ಪೂರಿನಲ್ಲಿ ಪೊಲೀಸರ ಸಕಾಲಿಕ ಕಾರ್ಯಾಚರಣೆ: ಪಿಸ್ತೂಲ್ ಸಹಿತ ಮೂವರು ವಶಕ್ಕೆ

ಉಡುಪಿ: ಜಿಲ್ಲೆಯ ಉಪ್ಪೂರು ಗ್ರಾಮದ ಪರಾರಿ ಜಂಕ್ಷನ್‌ನಲ್ಲಿ ಪೊಲೀಸರು ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ದೇಶಿ ನಿರ್ಮಿತ ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ರಾಕೇಶ್ ಮರಕಾಲ, ರಾಘವೇಂದ್ರ ಕಾಂಚನ್ ಹಾಗೂ ವಿಘ್ನಶ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ಎರಡು ಜೀವಂತ ಗುಂಡುಗಳು, ಐಷಾರಾಮಿ ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ:
ಜುಲೈ 9ರಂದು ರಾತ್ರಿ ಪೊಲೀಸರು ಉಪ್ಪೂರು ಗ್ರಾಮದ ಪರಾರಿ ಜಂಕ್ಷನ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೊಳಲಗಿರಿ ಕಡೆಯಿಂದ ಮಣಿಪಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಫ್ರಾಂಕ್ಸ್ ಕಾರನ್ನು ಪೊಲೀಸರು ತಡೆದು ಚಾಲಕನಲ್ಲಿ ಕಾರಿನ ದಾಖಲೆಗಳನ್ನು ಕೇಳಿದಾಗ ಚಾಲಕ ತೀವ್ರವಾಗಿ ಗಾಬರಿಗೊಂಡು ಉತ್ತರಿಸಲು ತಡಬಡಾಯಿಸಿದ್ದಾನೆ. ಇದರಿಂದ ಚಾಲಕನ ವರ್ತನೆ ಅನುಮಾನಾಸ್ಪದವಾಗಿದ್ದರಿಂದ ಕಾರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಯಿತು. ತಪಾಸಣೆ ವೇಳೆ ಚಾಲಕನ ಎಡಬದಿಯ ಸೀಟಿನ ಎದುರಿನ ಡ್ಯಾಶ್‌ಬೋರ್ಡ್ ಒಳಗಡೆ ಕಿತ್ತಳೆ ಬಣ್ಣದ ಬಟ್ಟೆಯ ಚೀಲದಲ್ಲಿ ದೇಶಿ ನಿರ್ಮಿತ ಪಿಸ್ತೂಲ್ ಪತ್ತೆಯಾಯಿತು. ಈ ಬಗ್ಗೆ ವಿಚಾರಿಸಿದಾಗ ಕಾರಿನಲ್ಲಿದ್ದ ರಾಘವೇಂದ್ರ ಕಾಂಚನ್ ಶಸ್ತ್ರ ತನ್ನದೇ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಅದನ್ನು ಹೊಂದಲು ಅಗತ್ಯವಾದ ಯಾವುದೇ ಕಾನೂನುಬದ್ಧ ಪರವಾನಗಿ ಅಥವಾ ದಾಖಲೆಗಳನ್ನು ಸಲ್ಲಿಸಲು ವಿಫಲನಾಗಿದ್ದಾನೆ.
ತಕ್ಷಣ ಸ್ಥಳಕ್ಕೆ ಜಿಲ್ಲಾ ಅಪರಾಧ ಪರಿಶೀಲನಾ ಅಧಿಕಾರಿ (SOCO) ತಂಡವನ್ನು ಕರೆಸಲಾಗಿದ್ದು, ಪರಿಶೀಲನೆಯ ವೇಳೆ ಪಿಸ್ತೂಲ್ ದೇಶಿ ನಿರ್ಮಿತವಾಗಿರುವುದು ಹಾಗೂ ಅದರೊಳಗೆ ಎರಡು ಜೀವಂತ ಗುಂಡುಗಳಿರುವುದು ದೃಢಪಟ್ಟಿದೆ.

ಆರೋಪಿಗಳು ಯಾವುದೋ ಅಪರಾಧ ಕೃತ್ಯ ಎಸಗುವ ಉದ್ದೇಶದಿಂದ ಅಕ್ರಮವಾಗಿ ಶಸ್ತ್ರಾಸ್ತ್ರವನ್ನು ಸಾಗಿಸುತ್ತಿದ್ದರು ಎಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಮೂವರನ್ನೂ ವಶಕ್ಕೆ ಪಡೆದು ಕಾರು ಸೇರಿದಂತೆ ವಶಪಡಿಸಿಕೊಂಡ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಹಿನ್ನೆಲೆ ಹಾಗೂ ಶಸ್ತ್ರಾಸ್ತ್ರದ ಮೂಲದ ಕುರಿತು ತನಿಖೆ ಮುಂದುವರಿಸಿದ್ದಾರೆ.