ಡೈಲಿವಾರ್ತೆ:17/ಆಗಸ್ಟ್ /2026

ಕಳಪೆ ಆಹಾರಕ್ಕೆ ಕಡಿವಾಣ: ಹೋಟೆಲ್‌, ಪಿಜಿ, ಮೆಡಿಕಲ್‌ ಸ್ಟೋರ್‌ಗಳಲ್ಲಿ ‘QR’ ಕೋಡ್ ಕಣ್ಗಾವಲು – ಸ್ಕ್ಯಾನ್ ಮಾಡಿ ದೂರು ನೀಡಬಹುದು: ಅರೋಗ್ಯ ಸಚಿವ ಯುಟಿ ಖಾದರ್

ಬೆಂಗಳೂರು: ಸಾರ್ವಜನಿಕರು ಆಹಾರ ಸೇವಿಸುವ ಹೋಟೆಲ್‌,ಪಿಜಿ,ಮೆಡಿಕಲ್‌ ಸ್ಟೋರ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಇನ್ಮುಂದೆ QR ಕೋಡ್ ಅಳವಡಿಸಿ, ಸಾರ್ವಜನಿಕರ ದೂರುಗಳಿಗೆ ತ್ವರಿತ ಸ್ಪಂದಿಸುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯುಟಿ. ಖಾದರ್ ತಿಳಿಸಿದ್ದಾರೆ.

QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಹಾರ ಗುಣಮಟ್ಟ, ಸೇವೆ ಅಥವಾ ಇತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಹಾರ ಇಲಾಖೆ ನಡೆಸಿದ ಕಾರ್ಯಾಚರಣೆಗಳ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಬೆಂಗಳೂರಿನ ಹೋಟೆಲ್‌ಗಳ ಮೇಲಿನ ದಾಳಿ ಮುಂದುವರಿಯಲಿದೆ. ಇದರ ಜೊತೆಗೆ ಖಾಸಗಿ ಹಾಸ್ಟೆಲ್‌, ಪಿಜಿ, ಬಸ್‌ ನಿಲ್ದಾಣ, ಮದುವೆ ಮನೆ, ರೈಲ್ವೆ ಕ್ಯಾಂಟೀನ್‌ ಹಾಗೂ ವಿಮಾನಗಳಲ್ಲಿ ನೀಡುವ ಆಹಾರವನ್ನೂ ಪರಿಶೀಲಿಸಲಾಗುವುದು ಎಂದು ಖಾದರ್ ಹೇಳಿದ್ದಾರೆ. ಪಿಜಿಗಳಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದು ಪತ್ತೆಯಾದರೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.