ಡೈಲಿವಾರ್ತೆ: 19/ನ./2026

ಕುಂದಾಪುರ: ಎಕ್ಸಲೆಂಟ್‌ನಲ್ಲಿ ಒಂದು ಕೋಟಿವರೆಗೆ ವಿದ್ಯಾರ್ಥಿವೇತನಕ್ಕೆ ESET–2027 ಪ್ರವೇಶ ಪರೀಕ್ಷೆ:

  • ಎಕ್ಸಲೆಂಟ್‌ನಿಂದ ರಾಜ್ಯದಲ್ಲೇ ಪ್ರಥಮ ಬಾರಿಗೆ ಎಐ ಆಧಾರಿತ ಪ್ರವೇಶ ಪರೀಕ್ಷೆ -ನ. 25ರಿಂದ ಆರಂಭ!
  • ವಿದ್ಯಾರ್ಥಿಗಳ ಸಮಯ, ಹಣ ಉಳಿತಾಯಕ್ಕೆ ವಿನೂತನ ಯೋಜನೆ – ಎಂ. ಮಹೇಶ್ ಹೆಗ್ಡೆ

ಕುಂದಾಪುರ: ಶಿಕ್ಷಣ ಕ್ಷೇತ್ರದಲ್ಲಿ ಹೊಸತನ ಮತ್ತು ನವೀನ ಪ್ರಯೋಗಗಳಿಗೆ ಆದ್ಯತೆ ನೀಡುತ್ತಾ ಮುನ್ನಡೆಯುತ್ತಿರುವ ಸುಣ್ಣಾರಿಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ಆಧಾರಿತ (AI Proctored) ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಮಹೇಶ್ ಹೆಗ್ಡೆ ತಿಳಿಸಿದರು.

ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜಿನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 14 ವರ್ಷಗಳಿಂದ ಸಂಸ್ಥೆಯು ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಾ ಬಂದಿದೆ. ಈ ಬಾರಿ ಸಿಇಟಿ, ನೀಟ್, ಜೆಇಇ ಮೇನ್ಸ್ ಮತ್ತು ಅಡ್ವಾನ್ಸ್ಡ್, ಸಿಎ ಹಾಗೂ ಸಿಎಸ್ ಪರೀಕ್ಷೆಗಳಲ್ಲಿ ಕುಂದಾಪುರ ತಾಲೂಕಿನಲ್ಲಿ ಮುಂಚೂಣಿ ಸಾಧನೆ ಮಾಡಿದೆ. ಶೈಕ್ಷಣಿಕ ಸಾಧನೆಯ ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಗುರುತಿಸಿಕೊಂಡಿದ್ದಾರೆ ಎಂದರು.

ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರ್ಣಗೊಳಿಸುವುದರೊಂದಿಗೆ ಸಂಸ್ಥೆಯ ಜವಾಬ್ದಾರಿ ಮುಗಿಯುವುದಿಲ್ಲ. ನೀಟ್ ಮೂಲಕ ವೈದ್ಯಕೀಯ ಅಥವಾ ಸಿಇಟಿ ಮೂಲಕ ಎಂಜಿನಿಯರಿಂಗ್ ಪ್ರವೇಶ ಪಡೆದ ಬಳಿಕವೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ನೀಡುವ ಮೂಲಕ ಅವರ ಉನ್ನತ ಶಿಕ್ಷಣಕ್ಕೆ ಸಂಸ್ಥೆ ಬೆಂಬಲವಾಗಿ ನಿಲ್ಲುತ್ತಿದೆ. ಶಿಕ್ಷಣವನ್ನು ಕೇವಲ ವ್ಯವಹಾರವಾಗಿ ಪರಿಗಣಿಸದೆ, ಸಮಾಜಕ್ಕೆ ಮರಳಿ ಕೊಡುಗೆ ನೀಡುವ ಆಶಯದೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಈ ಬದ್ಧತೆಯಿಂದಾಗಿ ಬೇರೆ ಬೇರೆ ಪ್ರದೇಶಗಳ ಪೋಷಕರು ಪ್ರವೇಶಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕಿಸುತ್ತಿದ್ದು, ಬೇಡಿಕೆಯೂ ಹೆಚ್ಚುತ್ತಿದೆ ಎಂದು ಹೇಳಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಮೂಲಕ ಸಂಸ್ಥೆ ಪ್ರತಿವರ್ಷ ಸುಮಾರು ₹1 ಕೋಟಿವರೆಗೆ ವಿದ್ಯಾರ್ಥಿವೇತನ ನೀಡುತ್ತಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವ ಈ ಕಾರ್ಯ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಈ ಹಿಂದೆ ವಿದ್ಯಾರ್ಥಿವೇತನ ಮತ್ತು ಪ್ರವೇಶಾತಿ ಪರೀಕ್ಷೆಗಳನ್ನು ನಡೆಸಲು ವಿವಿಧ ಊರುಗಳಿಗೆ ತೆರಳಿ ಪರೀಕ್ಷೆ ಆಯೋಜಿಸುವುದು ಅಥವಾ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಆಹ್ವಾನಿಸುವುದು ಅನಿವಾರ್ಯವಾಗಿತ್ತು. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪ್ರಯಾಣದ ಖರ್ಚು, ಸಮಯದ ವ್ಯಯ ಸೇರಿದಂತೆ ಹಲವು ತೊಂದರೆಗಳು ಎದುರಾಗುತ್ತಿದ್ದವು. ವಿಶೇಷವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಿದ್ಧತೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಅಮೂಲ್ಯ ಸಮಯಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಯೂ ಈ ಅವಕಾಶದಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಎಐ ಪ್ರೋಕ್ಟರಡ್ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆಯಡಿ ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಥಮ ವರ್ಷದ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ದಿನದ 24 ಗಂಟೆಗಳಲ್ಲಿಯೂ ತಮಗೆ ಅನುಕೂಲವಾದ ಸಮಯದಲ್ಲಿ ಪರೀಕ್ಷೆ ಬರೆಯಬಹುದು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯಾಣದ ಅನಿವಾರ್ಯತೆ ಇರುವುದಿಲ್ಲ. ಸಮಯ ಮತ್ತು ಹಣದ ಉಳಿತಾಯದ ಜತೆಗೆ ಪರೀಕ್ಷಾ ಪ್ರಕ್ರಿಯೆಯೂ ಸುಲಭವಾಗಲಿದೆ.
ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಪ್ರವೇಶಾತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, ಕಂಪ್ಯೂಟರ್ ಮಾತ್ರವಲ್ಲದೆ ಮೊಬೈಲ್ ಫೋನ್ ಮೂಲಕವೂ ಪರೀಕ್ಷೆ ಬರೆಯಬಹುದು. ಈ ನೂತನ ವ್ಯವಸ್ಥೆಯು ನವೆಂಬರ್ 25ರಿಂದ ಅಧಿಕೃತವಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ ಎಂದು ಎಂ. ಮಹೇಶ್ ಹೆಗ್ಡೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ: ಮೊಬೈಲ್: 6361329550 ವೆಬ್‌ಸೈಟ್: https://excellentpucollege.com