


ಡೈಲಿವಾರ್ತೆ: 19/ನ./2026




ಸಾಲಿಗ್ರಾಮ: ಕಚೇರಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತ: ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ

ಕೋಟ: ಫೋಟೋಗ್ರಫಿ, ಕಂಪ್ಯೂಟರ್ ತಂತ್ರಜ್ಞಾನ, ವೆಬ್ಡಿಸೈನಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದ ಸಾಲಿಗ್ರಾಮದ ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ (52) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗುರುವಾರ ಬೆಳಿಗ್ಗೆ ಸಾಲಿಗ್ರಾಮದಲ್ಲಿರುವ ತಮ್ಮ ಕಚೇರಿಯಲ್ಲಿ ಕುಳಿತಿದ್ದ ಸಂದರ್ಭದಲ್ಲೇ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅವರ ಅಕಾಲಿಕ ನಿಧನದ ಸುದ್ದಿ ಬಂಧುಮಿತ್ರರು ಹಾಗೂ ಪರಿಚಿತರಲ್ಲಿ ತೀವ್ರ ಆಘಾತ ಮತ್ತು ಶೋಕಕ್ಕೆ ಕಾರಣವಾಗಿದೆ.
ವೃತ್ತಿಪರವಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಆಸಕ್ತಿ ಮತ್ತು ಕೌಶಲ್ಯವನ್ನು ಬೆಳೆಸಿಕೊಂಡಿದ್ದ ದಿನೇಶ್ ಹೊಳ್ಳ ಅವರು ಫೋಟೋಗ್ರಫಿ, ಕಂಪ್ಯೂಟರ್ ತಂತ್ರಜ್ಞಾನ, ವೆಬ್ಡಿಸೈನಿಂಗ್, ಕಾರ್ಟೂನ್ ರಚನೆ ಹಾಗೂ ಚಪ್ಪಲಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸಂಖ್ಯಾಶಾಸ್ತ್ರದ ಮೂಲಕ ಜ್ಯೋತಿಷ್ಯ ಮಾರ್ಗದರ್ಶನವನ್ನೂ ನೀಡುತ್ತಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಜ್ಞಾನ ಮತ್ತು ಅನುಭವ ಹೊಂದಿದ್ದ ಅವರು, ತಮ್ಮ ಬಹುಮುಖ ಆಸಕ್ತಿಗಳ ಮೂಲಕ ಪರಿಚಿತರಾಗಿದ್ದರು. ಮೃತರು ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

