ಡೈಲಿವಾರ್ತೆ:25/ಆಗಸ್ಟ್ /2026

ಮಲ್ಪೆ ಧಕ್ಕೆಯಲ್ಲಿ ಮೀನು ಕಾರ್ಮಿಕನ ಕೊಲೆ: ರೈಲು ಹತ್ತಿ ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಬಲೆಗೆ

ಉಡುಪಿ: ಮಲ್ಪೆಯ ಧಕ್ಕೆಯ ಪಡುಕೆರೆ ಪ್ರದೇಶದಲ್ಲಿ ಮೀನು ಕಾರ್ಮಿಕನನ್ನು ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಡುಪಿ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.

ರಾಯಚೂರು ಮೂಲದ ಗೋವಿಂದ ರಾಜು ಪೊಲೀಸರ ವಶಕ್ಕೆ ಸಿಕ್ಕಿರುವ ಆರೋಪಿ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ಪಡುಕೆರೆ ದಕ್ಕೆ ಪ್ರದೇಶದಲ್ಲಿ ಆಗಸ್ಟ್ 24ರ ರಾತ್ರಿ ಬೋಟ್‌ನಲ್ಲಿ ಗೋವಿಂದ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಆಗಸ್ಟ್ 25ರ ಬೆಳಗಿನ ಜಾವ ಅಭಿಷೇಕ್‌ನನ್ನು ಕೊಲೆಗೈದು ಗೋವಿಂದ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ (ಕಾ&ಸು) ಅನಿಲ್ ಕುಮಾರ್ ಡಿ. ನೇತೃತ್ವದಲ್ಲಿ ಸಿಬ್ಬಂದಿಗಳಾದ ಹೆಚ್‌ಸಿ ಆದರ್ಶ ಹಾಗೂ ಪಿಸಿ ಕುಬೇರ ಅವರನ್ನೊಳಗೊಂಡ ತಂಡ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿತು.

ಕೊಲೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಗೋವಿಂದ, ಹೈದರಾಬಾದ್ ಅಥವಾ ಮುಂಬೈ ಕಡೆಗೆ ರೈಲಿನಲ್ಲಿ ತೆರಳುವ ಉದ್ದೇಶದಿಂದ ಉಡುಪಿ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ಪೊಲೀಸರು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಗೋವಿಂದ ಕಳೆದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ, ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆಗಳಲ್ಲಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣ, ಗಲಾಟೆಯ ಹಿನ್ನೆಲೆ ಹಾಗೂ ಕೃತ್ಯದಲ್ಲಿ ಮತ್ತಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.