


ಡೈಲಿವಾರ್ತೆ:24/ಆಗಸ್ಟ್ /2026

ಬ್ರಹ್ಮಾವರದಲ್ಲಿ ಘೋರ ಕೃತ್ಯ: ಸುತ್ತಿಗೆಯಿಂದ ಹೊಡೆದು ಹೆತ್ತ ತಂದೆ–ತಾಯಿಯನ್ನೇ ಕೊಂದ ಮಗ

ಬ್ರಹ್ಮಾವರ: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಮಗನೊಬ್ಬ ಹೆತ್ತ ತಂದೆ ಹಾಗೂ ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆಗೈದಿರುವ ಭೀಕರ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮೃತರನ್ನು ಗಾಂಧಿನಗರದ ನಿವಾಸಿಗಳಾದ ಮಹಮ್ಮದ್ ಅಲಿ(55) ಹಾಗೂ ಅವರ ಪತ್ನಿ ಸಂಶದ್ ಬೇಗಂ (51) ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಆರೋಪದ ಮೇಲೆ ಅವರ ಪುತ್ರ ಶಾಹಿದ್ ಅಲಿ (31) ಎಂಬಾತನನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗಾಂಧಿನಗರದ 5 ಸೆಂಟ್ಸ್ ಜಾಗದಲ್ಲಿ ಕುಟುಂಬ ವಾಸವಾಗಿತ್ತು. ಮಹಮ್ಮದ್ ಅಲಿ ಅವರು ಮಲ್ಪೆಯಲ್ಲಿ ಮೀನು ಸಾಗಾಟದ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಸಂಶದ್ ಬೇಗಂ ಗೃಹಿಣಿಯಾಗಿದ್ದರು. ದಂಪತಿಗೆ ಓರ್ವ ಪುತ್ರಿ ಹಾಗೂ ಓರ್ವ ಪುತ್ರನಿದ್ದು, ಪುತ್ರಿ ವಿವಾಹವಾಗಿ ಗಂಡನ ಮನೆಯಲ್ಲಿದ್ದಾರೆ.
ಆರೋಪಿ ಶಾಹಿದ್ ಅಲಿ ಜುಮೆಟೋ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಇತ್ತೀಚೆಗೆ ಕೆಲಸಕ್ಕೆ ಸರಿಯಾಗಿ ತೆರಳದೆ ಮನೆಯಲ್ಲೇ ಇರುತ್ತಿದ್ದ ಎಂದು ತಿಳಿದುಬಂದಿದೆ.

ತಂದೆ, ತಾಯಿ ತನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿ ಪೊಲೀಸರಿಗೆ ಹೇಳಿದ್ದಾನೆ.
ಭಾನುವಾರ ರಾತ್ರಿ ಕೂಡ ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳ ಆರಂಭಿಸಿದ ಶಾಹಿದ್ ಅಲಿ, ಏಕಾಏಕಿ ಸುತ್ತಿಗೆಯಿಂದ ತಂದೆ ಮಹಮ್ಮದ್ ಅಲಿ ಅವರ ತಲೆಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ತಾಯಿಯ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯ ಎಸಗಿದ ಬಳಿಕ ಆರೋಪಿ ಮನೆಯಲ್ಲೇ ಇದ್ದು, ಸೋಮವಾರ ಬೆಳಗ್ಗೆ ಸುಮಾರು 9 ಗಂಟೆಗೆ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ತಂದೆ-ತಾಯಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಮಾಹಿತಿ ಲಭಿಸುತ್ತಿದ್ದಂತೆ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಂ ಶಂಕರ್, ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹಗಳನ್ನು ಮಣಿಪಾಲಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ಕಳಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಕೃತ್ಯಕ್ಕೆ ನಿಖರ ಕಾರಣವೇನು ಹಾಗೂ ಕೊಲೆಗೆ ಬಳಸಿದ ಆಯುಧ ಸೇರಿದಂತೆ ಪ್ರಕರಣದ ಸಂಪೂರ್ಣ ವಿವರಗಳ ಕುರಿತು ತನಿಖೆ ಮುಂದುವರಿದಿದೆ.