ಡೈಲಿವಾರ್ತೆ:25/ಆಗಸ್ಟ್ /2026

ದರ್ಬೆ ಹಲ್ಲೆ ಪ್ರಕರಣ: ಪುತ್ತೂರಿನಲ್ಲಿ ಈದ್ ಮಿಲಾದ್ ನಡುವೆ ಸ್ವಯಂಪ್ರೇರಿತ ಬಂದ್ – ಬಿಗಿ ಪೊಲೀಸ್ ಬಂದೋಬಸ್ತ್

ಪುತ್ತೂರು: ದರ್ಬೆಯಲ್ಲಿ ಝರಾಕ್ಸ್ ಅಂಗಡಿ ಮಾಲಕಿ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿಲ್ಲ ಎಂದು ಆರೋಪಿಸಿ ಪೊಲೀಸರ ನಡೆಯನ್ನು ಖಂಡಿಸಿ ಪುತ್ತೂರು ನಗರದಲ್ಲಿ ಹಿಂದು ಸಂಘಟನೆಗಳು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು ಬಹುತೇಕ ಅಂಗಡಿ, ವ್ಯಾಪಾರ ಸಂಕೀರ್ಣಗಳು ಬಂದ್ ಆಗಿವೆ.

ಹಿಂದೂ ಜಾಗರಣ ವೇದಿಕೆ ನೀಡಿದ್ದ ಬಂದ್ ಕರೆಗೆ ಬಿಜೆಪಿ, ವಿವಿಧ ಹಿಂದೂ ಪರ ಸಂಘಟನೆಗಳು ಹಾಗೂ ಬಿಎಂಎಸ್ ಆಟೋ ಯೂನಿಯನ್ ಬೆಂಬಲ ಸೂಚಿಸಿವೆ. ನಗರದ ಬಹುತೇಕ ಅಂಗಡಿಗಳು ಹಾಗೂ ವ್ಯಾಪಾರ ಸಂಕೀರ್ಣಗಳು ಮುಚ್ಚಿದ್ದು, ಬೆರಳೆಣಿಕೆಯಷ್ಟು ಅಂಗಡಿಗಳು ಮಾತ್ರ ತೆರೆದಿದ್ದವು. ಆಟೋ ರಿಕ್ಷಾಗಳ ಸಂಚಾರವೂ ಗಣನೀಯವಾಗಿ ಕಡಿಮೆಯಾಗಿತ್ತು.
ಇದೇ ವೇಳೆ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಹಲವು ಅಂಗಡಿಗಳೂ ಬಂದ್ ಆಗಿದ್ದವು. ಬಂದ್ ಹಾಗೂ ಈದ್ ಮಿಲಾದ್ ಒಂದೇ ದಿನ ಬಂದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಭದ್ರತೆಗಾಗಿ ಒಬ್ಬ ಹೆಚ್ಚುವರಿ ಎಸ್‌ಪಿ, ಓರ್ವ ಡಿವೈಎಸ್‌ಪಿ, 8 ಪಿಎಸ್‌ಐ, 10 ಎಎಸ್‌ಐ ಸೇರಿದಂತೆ ಸುಮಾರು 50 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರ ಜೊತೆಗೆ 5 ಕೆಎಸ್‌ಆರ್‌ಪಿ ತುಕಡಿ, 3 ಡಿಎಆರ್ ತುಕಡಿ ಹಾಗೂ ಒಂದು ಸ್ಪೆಷಲ್ ಆಕ್ಷನ್ ಫೋರ್ಸ್ ತುಕಡಿಯನ್ನು ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಈ ನಡುವೆ ಪುತ್ತೂರಿಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ಬೆಳಗ್ಗೆ ನಡೆದ ಈದ್ ಮಿಲಾದ್ ಮೆರವಣಿಗೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು, ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ನಗರದಲ್ಲಿ ಯಾವುದೇ ಬಲವಂತದ ಬಂದ್ ನಡೆದಿಲ್ಲ. ಸಂಘಟನೆಗಳು ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಿದ್ದು, ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪುತ್ತೂರಿನ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಎಸ್ಪಿ ಅರುಣ್ ಸ್ಪಷ್ಟಪಡಿಸಿದರು.

ದರ್ಬೆ ಹಲ್ಲೆ ಪ್ರಕರಣದ ತನಿಖೆ ಕುರಿತು ಪ್ರತಿಕ್ರಿಯಿಸಿದ ಅವರು ಪೊಲೀಸರು ಎಲ್ಲರನ್ನೂ ಕಾನೂನಿನ ಚೌಕಟ್ಟಿನಲ್ಲೇ ಸಮಾನವಾಗಿ ಪರಿಗಣಿಸುತ್ತಾರೆ. ತಪ್ಪು ಮಾಡಿರುವುದು ತನಿಖೆಯಲ್ಲಿ ದೃಢಪಟ್ಟವರ ವಿರುದ್ಧ ಕಾನೂನು ಪ್ರಕಾರ ಬಂಧನ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿರುವ ಪ್ರಕರಣಗಳಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.