ಡೈಲಿವಾರ್ತೆ:25/ಆಗಸ್ಟ್ /2026

ಉಡುಪಿ: ದೇವಸ್ಥಾನದ ಕೆರೆಯಲ್ಲಿ ಈಜಲು ತೆರಳಿದ 15ರ ಬಾಲಕ ನೀರಲ್ಲಿ ಮುಳುಗಿ ಮೃತ್ಯು

ಉಡುಪಿ: ದೇವಸ್ಥಾನದ ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಯೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಬೆಳ್ಳಂಪಳ್ಳಿ ಕುಕ್ಕಿಕಟ್ಟೆಯ ಕೃಷ್ಣ ನಾಯಕ್ ಅವರ ಪುತ್ರ ಆದಿತ್ಯ ನಾಯಕ್ (15) ಎಂದು ಗುರುತಿಸಲಾಗಿದೆ.

ಮೃತ ವಿದ್ಯಾರ್ಥಿ ಕುಕ್ಕಿಕಟ್ಟೆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ರಜೆಯ ಹಿನ್ನೆಲೆಯಲ್ಲಿ ಸಂಬಂಧಿಯೊಂದಿಗೆ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗಿದೆ.
ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭ ಕೆಲ ಭಕ್ತರು ದೇವಸ್ಥಾನದ ಕೆರೆಯಲ್ಲಿ ಈಜುತ್ತಿದ್ದರು. ಇದನ್ನು ಗಮನಿಸಿದ ಆದಿತ್ಯ ಕೂಡ ಕೆರೆಗೆ ಇಳಿದು ಈಜಲು ಆರಂಭಿಸಿದ್ದಾನೆ. ಈಜು ಬಾರದ ಕಾರಣ ಆತನೊಂದಿಗೆ ಬಂದಿದ್ದ ಸಂಬಂಧಿ ಕೆರೆಗೆ ಇಳಿಯದೆ ದಡದಲ್ಲೇ ಉಳಿದಿದ್ದರು.
ಕೆರೆಯ ಮಧ್ಯಭಾಗದಲ್ಲಿ ಈಜುತ್ತಿದ್ದ ಆದಿತ್ಯ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ತಕ್ಷಣ ದೇವಸ್ಥಾನದವರು ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತೆರಳಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು. ಸುಮಾರು ಒಂದು ಗಂಟೆಯ ಕಾರ್ಯಾಚರಣೆ ಬಳಿಕ ಆದಿತ್ಯನನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.
ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷಿಸಿದ ವೈದ್ಯರು ಆದಿತ್ಯ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.