


ಡೈಲಿವಾರ್ತೆ:26/ಆಗಸ್ಟ್ /2026

ಚಿಕ್ಕಮಗಳೂರು: ಟಿಪ್ಪು ಕಟೌಟ್‌ಗೆ ಪಾಕ್,ಮುಜಾಹಿದ್ ಹಾಡು ಬಳಕೆ – ಆರೋಪಿ ಬಂಧನ

ಚಿಕ್ಕಮಗಳೂರು: ಟಿಪ್ಪು ಸುಲ್ತಾನ್ ಕಟೌಟ್‌ನ ವಿಡಿಯೋಗೆ ಪಾಕಿಸ್ತಾನ ಹಾಗೂ ಮುಜಾಹಿದ್ ಪದಗಳನ್ನು ಒಳಗೊಂಡ ಹಾಡು ಹಾಕಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿ ಚಿಕ್ಕಮಗಳೂರು ಟಿಪ್ಪು ನಗರದ ಅಫ್ರಿದ್ (23) ಎಂದು ಗುರುತಿಸಲಾಗಿದೆ.
ಈತ ಖಾಸಗಿ ಕಾರು ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆರೋಪಿ ಅಫ್ರಿದ್ ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯನ್ನು ನಿರ್ವಹಿಸುತ್ತಿದ್ದು.
ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಯುವಕರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದರು. ಇದನ್ನು ವಿಡಿಯೋ ಮಾಡಿ ಅದಕ್ಕೆ ಪಾಕಿಸ್ತಾನ ಹಾಗೂ ಮುಜಾಹಿದ್ ಪದಗಳನ್ನು ಒಳಗೊಂಡ ಹಾಡು ಹಾಕಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ರೂಪದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಲ್ಲದೆ ಇದೇ ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿಯೂ ಹಂಚಿಕೊಂಡಿದ್ದಾನೆ. ಕೆಲವು ಇನ್‌ಸ್ಟಾಗ್ರಾಂ ಖಾತೆಗಳು ಹಾಗೂ ವ್ಯಕ್ತಿಗಳಿಗೆ ನೇರ ಸಂದೇಶದ ಮೂಲಕವೂ ವಿಡಿಯೋ ಕಳುಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕಳೆದ ಹಲವು ವರ್ಷಗಳಿಂದ ನಡೆಯುತ್ತಿದ್ದ ಕಾರ್ಯಕ್ರಮದ ರೀತಿಯಲ್ಲೇ ಈ ಬಾರಿಯೂ ಕಟೌಟ್ ಅಳವಡಿಸಲು ಅನುಮತಿ ನೀಡಲಾಗಿತ್ತು. ಆದರೆ ಯಾವುದೇ ಹೊಸ ಕಟೌಟ್‌ಗಳಿಗೆ ಅನುಮತಿ ನೀಡುವುದಿಲ್ಲ ಎಂದು ಸಂಘಟಕರಿಗೆ ಸ್ಪಷ್ಟ ಸೂಚನೆ ನೀಡಲಾಗಿತ್ತು. ಈ ನಡುವೆಯೇ ಸಂಜೆ 5.30ರ ಸುಮಾರಿಗೆ ಯುವಕರು 40 ಆಡಿ ಕಟೌಟ್ ಅಳವಡಿಸಿದ್ದರು.
ಅದರ ವಿಡಿಯೋವನ್ನು ವಿವಾದಾತ್ಮಕ ಹಾಡಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಿಕ್ಕಮಗಳೂರು ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.