


ಡೈಲಿವಾರ್ತೆ:26/ಆಗಸ್ಟ್ /2026

ಟಿಬೆಟ್‌ನಲ್ಲಿ ಹಿಮನದಿ ಸ್ಫೋಟದ ಶಂಕೆ: ಉತ್ತರ ನೇಪಾಳದಲ್ಲಿ ಭೀಕರ ಹಠಾತ್ ಪ್ರವಾಹ – 400ಕ್ಕೂ ಹೆಚ್ಚು ಮಂದಿ ನಾಪತ್ತೆ

ಕಠ್ಮಂಡು: ಉತ್ತರ ನೇಪಾಳದಲ್ಲಿ ಹಠಾತ್ ಪ್ರವಾಹ ಸಂಭವಿಸಿದ್ದು, ಗಡಿ ಜಿಲ್ಲೆಯಲ್ಲಿರುವ ಹಳ್ಳಿಗಳ ಹಲವು ಮನೆಗಳು ಕೊಚ್ಚಿ ಹೋಗಿವೆ. ಟಿಬೆಟ್‌ನಲ್ಲಿ ಹಿಮನದಿ ಸ್ಫೋಟ ಸಂಭವಿಸಿದ ಕಾರಣ ಅಪಾರ ಪ್ರಮಾಣದ ನೀರು ಹರಿದುಬಂದು ಪ್ರವಾಹ ಸ್ಥಿತಿ ಎದುರಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 9ಕ್ಕೆ ಭೋಟೆ ಕೋಸಿ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿದೆ. ಇದರಿಂದಾಗಿ ನದಿ ತಟದಲ್ಲಿರುವ ರಸುವಾ ಜಿಲ್ಲೆ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಹಲವು ಹಳ್ಳಿಗಳಲ್ಲಿ ಮನೆಗಳು, ವಾಹನ, ಸೇತುವೆಗಳು ಕೊಚ್ಚಿಹೋಗಿವೆ ಎಂದು ನೇಪಾಳ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ರಸುವಾ ಜಿಲ್ಲೆಯು ಕಠ್ಮಂಡುವಿನ ಈಶಾನ್ಯ ಭಾಗದಲ್ಲಿದ್ದು, ಟಿಬೆಟ್ ಗಡಿಯಿಂದ ಸುಮಾರು 125 ಕಿ.ಮೀ ದೂರದಲ್ಲಿದೆ. ಈ ಭೀಕರ ಹಠಾತ್ ಪ್ರವಾಹದಲ್ಲಿ ಸುಮಾರು 400 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ ಕನಿಷ್ಠ 115 ಭಾರತೀಯರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರವಾಹದಲ್ಲಿ ಹಲವರು ಮೃತಪಟ್ಟಿರುವ ಶಂಕೆಯಿದೆ. ಜತೆಗೆ ಕನಿಷ್ಠ 12 ಜಲವಿದ್ಯುತ್ ಯೋಜನೆಗಳಿಗೆ ಹಾನಿಯಾಗಿದೆ.
ರಸುವಾದಲ್ಲಿ ಉಂಟಾದ ಪ್ರವಾಹದ ಕಾರಣದಿಂದಾಗಿ ಒಟ್ಟು 384 ಪ್ರಯಾಣಿಕರು, ಇವರಲ್ಲಿ 291 ವಿದೇಶಿಯರು ಮತ್ತು 93 ನೇಪಾಳಿ ಪ್ರಜೆಗಳು ನಾಪತ್ತೆಯಾಗಿದ್ದಾರೆ.
ಈ ಪ್ರಯಾಣಿಕರಲ್ಲಿ ಕನಿಷ್ಠ 115 ಭಾರತೀಯ ಪ್ರವಾಸಿಗರು, 37 ಅನಿವಾಸಿ ಭಾರತೀಯರು ಹಾಗೂ ಅಮೆರಿಕ, ಮಲೇಷ್ಯಾ, ಯುಕೆ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ಸ್‌ನ ಪ್ರವಾಸಿಗರು ಸೇರಿದ್ದಾರೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ (NTB) ಹೇಳಿದೆ.
ಸಹಾಯಕ್ಕಾಗಿ ನೇಪಾಳ ಪ್ರವಾಸೋದ್ಯಮ ಮಂಡಳಿಯು ಉಚಿತ ತುರ್ತು ಸಹಾಯವಾಣಿ ತೆರೆದಿದ್ದು, 1234, ಹಾಟ್‌ಲೈನ್ ಸಂಖ್ಯೆ 1144 ಅಥವಾ ಪ್ರವಾಸಿ ಪೊಲೀಸ್ ಸಹಾಯವಾಣಿ ಸಂಖ್ಯೆ 9851289445 ಅನ್ನು ಬಿಡುಗಡೆ ಮಾಡಿದೆ.
ಕಣಿವೆಗಳ ಮೂಲಕ ರಭಸದಿಂದ ನುಗ್ಗಿ ಬರುತ್ತಿರುವ ಮಣ್ಣು ಮಿಶ್ರಿತ ನೀರಿನ ಪ್ರವಾಹದ ಭೀಕರ ದೃಶ್ಯಗಳ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ರಕ್ಷಣಾ ಕಾರ್ಯಕ್ಕಾಗಿ ಬಾಧಿತ ಪ್ರದೇಶಕ್ಕೆ ಹೆಲಿಕಾಪ್ಟರ್‌ಗಳು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ನೇಪಾಳ ಸೇನೆ ತಿಳಿಸಿದೆ.