ಡೈಲಿವಾರ್ತೆ:02/ಸೆ./2026

ಇರಾನ್ ಮೇಲೆ ಅಮೆರಿಕದ ಭೀಕರ ದಾಳಿ; ಜೋರ್ಡಾನ್‌ನಲ್ಲಿನ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಪ್ರಹಾರ!

ವಾಷಿಂಗ್ಟನ್/ಟೆಹ್ರಾನ್: ಒಂದು ತಿಂಗಳ ಕಾಲ ತುಸು ಶಾಂತವಾಗಿದ್ದ ಅಮೆರಿಕ-ಇರಾನ್ ಸಂಘರ್ಷ ಮತ್ತೆ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇರಾನ್‌ನ ಸೇನಾ ಹಾಗೂ ಪ್ರಮುಖ ಮೂಲಸೌಕರ್ಯ ಗುರಿಗಳ ಮೇಲೆ ಅಮೆರಿಕ ಮಂಗಳವಾರ ಪ್ರಬಲ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಘೋಷಿಸಿದೆ.

ಹಾರ್ಮುಜ್ ಜಲಸಂಧಿ ವಲಯದಲ್ಲಿ ಹಡಗುಗಳು ಹಾಗೂ ಅಮೆರಿಕದ ಸೇನಾ ಪಡೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್‌ನ ಸೇನಾ ನೆಲೆಗಳ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.

ಉಭಯ ರಾಷ್ಟ್ರಗಳ ನಡುವೆ ಕಳೆದ ಆರು ತಿಂಗಳಿಂದ ಸಂಘರ್ಷ ಮುಂದುವರಿದಿದ್ದು, ಮೂರು ದಿನಗಳ ಹಿಂದಷ್ಟೇ ಮತ್ತೆ ದಾಳಿ-ಪ್ರತಿದಾಳಿ ಆರಂಭವಾಗಿತ್ತು. ಇದೀಗ ನಡೆದಿರುವ ಕಾರ್ಯಾಚರಣೆ ತೀವ್ರ ಸ್ವರೂಪದ್ದಾಗಿದ್ದು, ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮತ್ತಷ್ಟು ವಿಸ್ತರಿಸುವ ಆತಂಕ ಎದುರಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು ಇರಿಸುವ ಇರಾನ್‌ನ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಇರಾನ್ ವಿರುದ್ಧ ಬೃಹತ್ ಹಾಗೂ ಪ್ರಬಲ ದಾಳಿ ನಡೆಸಲಾಗಿದೆ. ಒಂದು ವೇಳೆ ಇರಾನ್ ಮತ್ತೆ ಪ್ರತಿದಾಳಿಗೆ ಮುಂದಾದರೆ, ಅದಕ್ಕೂ ಅತ್ಯಂತ ತೀವ್ರ ಸ್ವರೂಪದಲ್ಲಿ ಉತ್ತರ ನೀಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆ, ರಡಾರ್ ವ್ಯವಸ್ಥೆಗಳು, ಸಮುದ್ರ ಆಸ್ತಿಗಳು, ಸ್ಫೋಟಕಗಳನ್ನು ಅಳವಡಿಸುವ ಸಾಮರ್ಥ್ಯ ಹಾಗೂ ಸಂವಹನ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದೆ.

ಹಲವು ನಗರಗಳ ಮೇಲೆ ದಾಳಿ:
ಹಾರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿರುವ ಚಬಹಾರ್ ಹಾಗೂ ಕೊನಾರಕ್ ಬಂದರು ನಗರಗಳ ಮೇಲೆ ದಾಳಿ ನಡೆದಿದೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇದರೊಂದಿಗೆ ದಕ್ಷಿಣ ಇರಾನ್‌ನ ಪ್ರಮುಖ ನಗರವಾದ ಬಂದರ್ ಅಬ್ಬಾಸ್‌ನ ವಿವಿಧ ಪ್ರದೇಶಗಳು, ಕ್ವೆಶ್ಮ್ ದ್ವೀಪದ ವಾಣಿಜ್ಯ ವಿಮಾನ ನಿಲ್ದಾಣ ಹಾಗೂ ಸಿರಿಕ್ ಮತ್ತು ಜಸ್ಕ್ ನಗರಗಳನ್ನೂ ಅಮೆರಿಕ ಗುರಿಯಾಗಿಸಿಕೊಂಡಿದೆ ಎಂದು ಹೆಸರು ಬಹಿರಂಗಪಡಿಸದಿರುವ ಷರತ್ತಿನೊಂದಿಗೆ ಇರಾನ್‌ನ ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ದಾಳಿಗಳಿಂದ ಹಲವು ಪ್ರದೇಶಗಳಲ್ಲಿ ತೀವ್ರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ಮನೆಯ ಮೇಲೂ ದಾಳಿ ಆರೋಪ; ಮಗು ಸೇರಿ ನಾಲ್ವರ ಸಾವು

ಇದರ ನಡುವೆ, ಹೋರ್ಮೊಜ್ಗಾನ್ ಪ್ರಾಂತ್ಯದ ಕುಹೆಸ್ಟಾಕ್ ನಗರದಲ್ಲಿ ಮದುವೆ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಕುರಿತು ಹೋರ್ಮೊಜ್ಗಾನ್ ಪ್ರಾಂತ್ಯದ ಉಪ ಗವರ್ನರ್ ಅಹ್ಮದ್ ನಫೀಸಿ ಸರ್ಕಾರಿ ಮಾಧ್ಯಮದೊಂದಿಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ದಾಳಿಯಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 53 ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ.

ಈ ವರದಿಗಳ ಬಗ್ಗೆ ಮಾಹಿತಿ ಇರುವುದಾಗಿ ಹೇಳಿರುವ ಅಮೆರಿಕದ ಸೆಂಟ್ರಲ್ ಕಮಾಂಡ್, ತಾವು ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಘೋರ ಪ್ರತೀಕಾರದ ಎಚ್ಚರಿಕೆ:
ಅಮೆರಿಕದ ದಾಳಿಗೆ ಪ್ರತಿಯಾಗಿ ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿಕೊಂಡಿದ್ದು, ಅಮೆರಿಕದ ವಿರುದ್ಧ ಘೋರ ಪ್ರತೀಕಾರ ತೀರಿಸುವ ಎಚ್ಚರಿಕೆಯನ್ನೂ ನೀಡಿದೆ.

ಆರು ತಿಂಗಳಿಂದ ಮುಂದುವರಿದಿರುವ ಅಮೆರಿಕ-ಇರಾನ್ ಸಂಘರ್ಷ ಮತ್ತೆ ತೀವ್ರಗೊಂಡಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ. ಪ್ರಮುಖ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿರುವ ಸಂಘರ್ಷ ಮತ್ತಷ್ಟು ರಾಷ್ಟ್ರಗಳಿಗೆ ವ್ಯಾಪಿಸುವ ಸಾಧ್ಯತೆ ಇರುವುದರಿಂದ, ಮಧ್ಯಪ್ರಾಚ್ಯದಲ್ಲಿ ಮತ್ತೊಂದು ದೊಡ್ಡ ಯುದ್ಧದ ಕಾರ್ಮೋಡ ಕವಿದಿದೆ.