


ಡೈಲಿವಾರ್ತೆ:02/ಸೆ./2026

ಕೋಟ-ಸಾಲಿಗ್ರಾಮ ರೋಟರಿ ಕ್ಲಬ್‌ನ ತಿಮ್ಮ ಪೂಜಾರಿ ಸಹಾಯಕ ಗವರ್ನರ್ ಆಗಿ ನೇಮಕ

ಕೋಟ: ರೋಟರಿ ಕ್ಲಬ್ ಆಫ್ ಕೋಟ ಸಾಲಿಗ್ರಾಮದ ಸದಸ್ಯರಾದ ರೊಟೇರಿಯನ್ ತಿಮ್ಮ ಪೂಜಾರಿ ಅವರನ್ನು ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3182ರ ವಲಯ-2ರ ಸಹಾಯಕ ಗವರ್ನರ್ ಆಗಿ 2027-28ನೇ ಸಾಲಿನ ರೋಟರಿ ವರ್ಷಕ್ಕೆ ನೇಮಕ ಮಾಡಲಾಗಿದೆ.
ರೋಟರಿ ಇಂಟರ್‌ನ್ಯಾಷನಲ್ ಜಿಲ್ಲೆ 3182ರ 2027-28ನೇ ಸಾಲಿನ ಜಿಲ್ಲಾ ಗವರ್ನರ್ ಪಿ.ಎಚ್.ಎಸ್.ಎಂ. ರೊಟೇರಿಯನ್ ವಸಂತ್ ಹೋಬಳಿದಾರ್ ಅವರು ತಿಮ್ಮ ಪೂಜಾರಿ ಅವರ ನೇಮಕಾತಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ತಿಮ್ಮ ಪೂಜಾರಿ ಅವರು ರೋಟರಿ ಸಂಸ್ಥೆಗೆ ನೀಡಿರುವ ಸೇವೆ, ನಾಯಕತ್ವ ಗುಣಗಳು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೋರಿದ ಬದ್ಧತೆಯನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ನೇಮಕಾತಿ ಪತ್ರದಲ್ಲಿ ತಿಳಿಸಲಾಗಿದೆ.
ಸಹಾಯಕ ಗವರ್ನರ್ ಆಗಿ ಅವರು ಜಿಲ್ಲಾ ಗವರ್ನರ್ ತಂಡ ಮತ್ತು ವಲಯ-2ಕ್ಕೆ ನಿಯೋಜಿಸಲಾದ ರೋಟರಿ ಕ್ಲಬ್‌ಗಳ ನಡುವಿನ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕ್ಲಬ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗಳಿಗೆ ವಾರ್ಷಿಕ ಗುರಿಗಳನ್ನು ಸಾಧಿಸಲು ಮಾರ್ಗದರ್ಶನ ನೀಡುವುದು, ಸದಸ್ಯತ್ವ ವೃದ್ಧಿ ಹಾಗೂ ರೋಟರಿ ಫೌಂಡೇಶನ್‌ಗೆ ಕೊಡುಗೆ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ನೀಡುವುದು ಅವರ ಪ್ರಮುಖ ಜವಾಬ್ದಾರಿಗಳಾಗಿವೆ.
ಇದಲ್ಲದೆ, ಜಿಲ್ಲಾ ನಾಯಕತ್ವ ಮತ್ತು ಕ್ಲಬ್‌ಗಳ ನಡುವೆ ಸಮರ್ಪಕ ಸಂವಹನ ಕಲ್ಪಿಸುವುದು, ಜಿಲ್ಲಾ ಗವರ್ನರ್ ಅವರ ಅಧಿಕೃತ ಕ್ಲಬ್ ಭೇಟಿಗಳನ್ನು ಸಂಯೋಜಿಸುವುದು, ವಲಯ ಮಟ್ಟದ ಕಾರ್ಯಕ್ರಮಗಳು ಹಾಗೂ ಜಂಟಿ ಕ್ಲಬ್ ಸಭೆಗಳಿಗೆ ಸಹಕಾರ ನೀಡುವುದು ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಅವರು ನಿರ್ವಹಿಸಲಿದ್ದಾರೆ.
ವಲಯ ಮತ್ತು ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮಗಳು, ಸೆಮಿನಾರ್‌ಗಳು, ಅಸೆಂಬ್ಲಿಗಳು, ವಿವಿಧ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಸಮ್ಮೇಳನಗಳಲ್ಲಿ ಭಾಗವಹಿಸಿ ಅವುಗಳನ್ನು ಯಶಸ್ವಿಗೊಳಿಸುವ ಜವಾಬ್ದಾರಿಯೂ ಅವರಿಗೆ ವಹಿಸಲಾಗಿದೆ.
ತಿಮ್ಮ ಪೂಜಾರಿ ಅವರ ಮಾರ್ಗದರ್ಶನವು ವಲಯದ ರೋಟರಿ ಕ್ಲಬ್‌ಗಳಿಗೆ ಸ್ಫೂರ್ತಿ ನೀಡಿ, ಯಶಸ್ಸಿನತ್ತ ಮುನ್ನಡೆಸಲಿದೆ ಎಂಬ ವಿಶ್ವಾಸವಿದೆ. ‘ಸೇವೆಯೇ ಶ್ರೇಷ್ಠ’ ಎಂಬ ರೋಟರಿಯ ಧ್ಯೇಯದೊಂದಿಗೆ ಅವರು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್ ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರತಿಷ್ಠಿತ ನೇಮಕಾತಿಗೆ ತಿಮ್ಮ ಪೂಜಾರಿ ಅವರಿಗೆ ರೋಟರಿ ಸದಸ್ಯರು, ಸ್ನೇಹಿತರು ಹಾಗೂ ವಿವಿಧ ಗಣ್ಯರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.