


ಡೈಲಿವಾರ್ತೆ:01/ಸೆ./2026

ಅಚ್ಲಾಡಿಯಲ್ಲಿ ಚಿರತೆ ಸೆರೆ: ಗ್ರಾಮಸ್ಥರ ಆತಂಕಕ್ಕೆ ಕೊನೆ!

ಕೋಟ: ಅಚ್ಲಾಡಿ ಗ್ರಾಮದ ಗರಿಕೆ ಮಠ ಸುತ್ತಮುತ್ತ ಕಳೆದ ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿನಲ್ಲಿ ಸೆರೆಯಾಗಿದೆ.
ಸ್ಥಳೀಯ ಪ್ರದೇಶದ ಹಲವಾರು ಸಾಕು ನಾಯಿಗಳು ಚಿರತೆಗೆ ಆಹಾರವಾಗಿದ್ದು, ಚಿರತೆಯ ನಿರಂತರ ಓಡಾಟದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಮನೆಯಿಂದ ಹೊರಬರಲು ಸ್ಥಳೀಯರು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಚಿರತೆಯ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗರಿಕೆ ಮಠದ ಹರೀಶ್ ಶೆಟ್ಟಿ ಅವರ ತೋಟದಲ್ಲಿ ಸುಮಾರು ಒಂದು ವಾರದ ಹಿಂದೆ ಬೋನು ಇರಿಸಲಾಗಿತ್ತು. ಕೊನೆಗೂ ಸೆಪ್ಟೆಂಬರ್ 1ರ ಮಂಗಳವಾರ ಮುಂಜಾನೆ ಚಿರತೆ ಬೋನಿಗೆ ಬಿದ್ದಿದೆ.
ಸೆರೆಸಿಕ್ಕಿರುವುದು ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ಸಿಬ್ಬಂದಿ, ಅದನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸಿ ಬಿಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಈ ನಡುವೆ, ಇದೇ ಪ್ರದೇಶದಲ್ಲಿ ಇನ್ನೂ ಎರಡು ಅಥವಾ ಮೂರು ಚಿರತೆ ಮರಿಗಳು ಓಡಾಡುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಸಂಪೂರ್ಣವಾಗಿ ದೂರವಾಗಿಲ್ಲವಾಗಿದ್ದು, ಅರಣ್ಯ ಇಲಾಖೆ ಮುಂದಿನ ಕ್ರಮಗಳ ಕುರಿತು ಗಮನ ಹರಿಸಿದೆ.